ಬೆಂಗಳೂರು: ಸರ್ಕಾರದ ಇಚ್ಛಾಶಕ್ತಿ ಕೊರತೆ, ಅಸಮರ್ಪಕ ನಿರ್ವಹಣೆ, ಭ್ರಷ್ಟಾಚಾರ ಸೇರಿದಂತೆ ಹಲವಾರು ಕಾರಣಗಳಿಂದ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಯಾವಾಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಲೇ ಇವೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವಂತಾಗಿದೆ. ಹೀಗಾಗಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಹೀಗಾಗಿ ಸರ್ಕಾರವು ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಇತರೆ ಶಾಲೆಗಳೊಂದಿಗೆ ಸಂಯೋಜಿಸಿ ‘ಹಬ್ ಆ್ಯಂಡ್ ಸ್ಪೋಕ್ ಮಾಡೆಲ್’(Hub and spoke model) ರೀತಿ ಅಭಿವೃದ್ಧಿ ಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಆ ಮೂಲಕ ಕಡಿಮೆ ವಿದ್ಯಾರ್ಥಿಗಳು ಹೊಂದಿರುವ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನ ಪದ ಬಳಸದೆ ಸಮೀಪದ ಶಾಲೆಗೆ ಸಂಯೋಜಿಸುವ ನಿರ್ಧಾರ ಕೈಗೊಳ್ಳುತ್ತಿದೆ.
ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ‘ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ’ ರಚಿಸಿದೆ. ಈ ಸಮಿತಿಗೆ ಕಡಿಮೆ ವಿದ್ಯಾರ್ಥಿಗಳು ಹೊಂದಿರುವ ಶಾಲೆಗಳಲ್ಲಿ ಯಾವ ರೀತಿಯ ಕ್ರಮವಹಿಸಬೇಕೆಂದು ಸೂಚಿಸಿದೆ. ಅತಿ ಕಡಿಮೆ ದಾಖಲಾತಿ ಹೊಂದಿರುವ ಸರಕಾರಿ ಶಾಲೆಗಳನ್ನು ಗುರುತಿಸಿ ಮಕ್ಕಳ ಹಿತಾಸಕ್ತಿಯಿಂದ ಆ ಶಾಲೆಗಳನ್ನು ಹತ್ತಿರದ ಸರ್ಕಾರಿ ಶಾಲೆಗಳಿಗೆ ಸಂಯೋಜಿಸಲು ಸೂಚಿಸಿದೆ. ಈ ಸಂಯೋಜಿತ ಶಾಲೆಗಳನ್ನು ‘ಹಬ್ ಆ್ಯಂಡ್ ಸ್ಪೋಕ್ ಮಾಡೆಲ್’ ಎಂದು ನಾಮಕರಣ ಮಾಡಲಾಗಿದೆ.
ರಾಜ್ಯದಲ್ಲಿ 4265 ಶಾಲೆಗಳು 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. 5412 ಏಕೋಪಧ್ಯಾಯ ಶಾಲೆಗಳಿವೆ. ಒಟ್ಟು 46,755 ಸರ್ಕಾರಿ ಶಾಲೆಗಳಿದ್ದು, ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಿದೆ. ಹೀಗಾಗಿ ಮುಚ್ಚುವುದು ಹಾಗೂ ವಿಲೀನ ಎಂಬ ಪದ ಬಳಕೆ ಮಾಡಿದರೆ, ವಿರೋಧ ವ್ಯಕ್ತವಾಗುತ್ತದೆ ಎಂಬ ನಿಟ್ಟಿನಲ್ಲಿ ಸರ್ಕಾರ ಈ ಜಾಣ ನಡೆ ಪ್ರದರ್ಶಿಸುತ್ತಿದೆ. ಈ ಸಮಿತಿಯಲ್ಲಿ ತಹಸೀಲ್ದಾಲ್, ಸಿಇಒ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಒಟ್ಟು 14 ಜನ ಸಮತಿಯಲ್ಲಿ ಇರಲಿದ್ದಾರೆ. ಈ ಮೂಲಕ ಸರ್ಕಾರ ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನ ಮಾಡುತ್ತಾ? ಅಥವಾ ಅದರ ಹೆಸರಿನಲ್ಲಿ ಬಂದ್ ಮಾಡುತ್ತಾ? ಕಾಯ್ದು ನೋಡಬೇಕಿದೆ.