ಬೆಂಗಳೂರು: ಸರ್ಕಾರಿ ಕಚೇರಿಗಳೇ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಿಬಿಎಂಪಿ ನೋಟಿಸ್ ನೀಡಿದೆ ಎನ್ನಲಾಗಿದೆ.
ಇದರೊಂದಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೂ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ವಿಧಾನಸೌಧ, ವಿಕಾಸ ಸೌಧ, ರಾಜಭವನ ಸೇರಿದಂತೆ 258 ಸರ್ಕಾರಿ ಕಚೇರಿಗಳಿಗೆ ಕೂಡ ಬಿಬಿಎಂಪಿ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.
ಖಾಸಗಿ ಆಸ್ತಿಗಳಿಗೆ ನೀಡುವಂತೆಯೇ ಸರ್ಕಾರಿ ಆಸ್ತಿಗಳಿಗೂ ತೆರಿಗೆ ಬಾಕಿ ಪಾವತಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತೆರಿಗೆ ಬಾಕಿ ಉಳಿಯುತ್ತಲೇ ಇದೆ ಎನ್ನಲಾಗಿದೆ.
ವಿದ್ಯುತ್ ಕಚೇರಿಗಳು ಮತ್ತು ಸರ್ಕಾರಿ ಕಚೇರಿಗಳು ಬಾಕಿ ಇರಿಸಿಕೊಂಡಿರುವ ಆಸ್ತಿ ತೆರಿಗೆಯ ಒಟ್ಟು ಮೊತ್ತದ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಆದರೆ, ವರ್ಷಗಳಿಂದ ತೆರಿಗೆಗಳು ಪಾವತಿಯಾಗದೆ ಒಟ್ಟು ಮೊತ್ತವು ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.
ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಜ್ಞಾಪನೆ ಪತ್ರಗಳನ್ನು ಕಳುಹಿಸುತ್ತಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಬಿಬಿಎಂಪಿ ಸ್ಥಿರಾಸ್ತಿಯ ಹರಾಜಿನ ಮೂಲಕ ತೆರಿಗೆ ಬಾಕಿ ವಸೂಲಿ ಕ್ರಮಕ್ಕೆ ಮುಂದಾಗಿದೆ. ಆದರೆ, ಸರ್ಕಾರಿ ಕಚೇರಿಗಳ ವಿರುದ್ಧ ಇನ್ನೂ ಈ ರೀತಿಯ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಬಾಕಿ ಉಳಿಸಿಕೊಂಡ ಎಲ್ಲರಿಗೂ ಒಂದೇ ರೀತಿಯ ಕಾನೂನು ಇರಲಿ ಎಂದು ಮನವಿ ಮಾಡಿದ್ದಾರೆ.