ಬೆಂಗಳೂರು: ನೀವೇನಾದರೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದು ಬಯಸುತ್ತಿದ್ದೀರಾ? ಅದರಲ್ಲೂ, ಐರ್ಲೆಂಡ್ ನಲ್ಲಿ ಕೋರ್ಸ್ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಹೌದು, ಭಾರತದ ವಿದ್ಯಾರ್ಥಿಗಳು ಸೇರಿ ಜಗತ್ತಿನ ಹಲವು ದೇಶಗಳ 60 ವಿದ್ಯಾರ್ಥಿಗಳಿಗೆ ತಲಾ 10.86 ಲಕ್ಷ ರೂ. ಸ್ಕಾಲರ್ ಶಿಪ್ ನೀಡಲು ಐರ್ಲೆಂಡ್ ಸರ್ಕಾರವು ಅರ್ಜಿಗಳನ್ನು ಆಹ್ವಾನಿಸಿದೆ.
ದಿ ಗವರ್ನ್ ಮೆಂಟ್ ಆಫ್ ಐರ್ಲೆಂಡ್ ಇಂಟರ್ ನ್ಯಾಷನಲ್ ಸ್ಕಾಲರ್ ಶಿಪ್ (GOI-IES) ಯೋಜನೆಯನ್ನು ಐರ್ಲೆಂಡ್ ಸರ್ಕಾರವು ಘೋಷಣೆ ಮಾಡಿದೆ. ಜನವರಿ 29ರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದು ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಐರ್ಲೆಂಡ್ ಸರ್ಕಾರವು ಅವಕಾಶ ನೀಡಿದೆ. ಐರ್ಲೆಂಡ್ ನ ಯಾವುದಾದರೂ ಒಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಅರ್ಹ 60 ವಿದ್ಯಾರ್ಥಿಗಳಿಗೆ ತಲಾ 10.86 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಮಾರ್ಚ್ 12ರವರೆಗೆ ಅವಕಾಶ ನೀಡಲಾಗಿದೆ. ಜೂನ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರಕಾರ ಮಾಹಿತಿ ನೀಡಿದೆ. ಐರೋಪ್ಯ ಒಕ್ಕೂಟದ ದೇಶಗಳು, ಬ್ರಿಟನ್ ಹಾಗೂ ಸ್ವಿಟ್ಜರ್ ಲೆಂಡ್ ಹೊರತಾದ ಯಾವುದೇ ದೇಶದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು https://hea.ie/policy/internationalisation/goi-ies/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಗುಣಮಟ್ಟದ ಶಿಕ್ಷಣ ಪಡೆದು, ವಿದೇಶದಲ್ಲಿಯೇ ಲಕ್ಷಾಂತರ ರೂಪಾಯಿ ಸಂಬಳದ ಉದ್ಯೋಗ ಪಡೆಯಬೇಕು ಎಂದು ಬಯಸುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ರೇಷ್ಮೆ ಮಂಡಳಿಯಲ್ಲಿ 28 ಸೈಂಟಿಸ್ಟ್ ಹುದ್ದೆಗಳ ನೇಮಕಾತಿ | 1.77 ಲಕ್ಷ ರೂ. ಸಂಬಳ


















