ಬೆಂಗಳೂರು: ಕೋಟ್ಯಧಿಪತಿಗಳು, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಇರುವವರು, ಸರ್ಕಾರಿ ನೌಕರಿಯಲ್ಲಿರುವವರು, ಹತ್ತಾರು ಎಕರೆ ಜಮೀನು ಹೊಂದಿದವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕದಲ್ಲಿ ಅನರ್ಹ 8 ಲಕ್ಷ ರೇಷನ್ ಕಾರ್ಡ್ ಗಳನ್ನು ರಾಜ್ಯ ಸರ್ಕಾರ ರದ್ದು ಮಾಡಲು ಮುಂದಾಗಿದೆ. ಇದೇ ತಿಂಗಳ ಅಂತ್ಯದೊಳಗೆ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕರ್ನಾಟಕ ಸರ್ಕಾರದ ಆಹಾರ ಇಲಾಖೆಯು ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಸುಮಾರು 12,68,097 ಅನುಮಾನಸ್ಪಾದ ರೇಷನ್ ಕಾರ್ಡ್ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಪೈಕಿ 8 ಲಕ್ಷ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆಹಾರ ಇಲಾಖೆಯಿಂದ ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಲಿದೆ. ಇದಾದ ಬಳಿಕ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ.
ವಿವಿಧ ಕಂಪನಿಗಳಲ್ಲಿ ಡೈರೆಕ್ಟರ್ ಹುದ್ದೆ ಹೊಂದಿದವರು, ವರ್ಷಕ್ಕೆ 25 ಲಕ್ಷ ರೂಪಾಯಿಗಿಂತ ಹೆಚ್ಚು ಸಂಬಳ ಹೊಂದಿದವರು, ಇ-ಕೆವೈಸಿ ಮಾಡಿಸದವರು, ಮೃತಪಟ್ಟವರ ಹೆಸರಿನಲ್ಲೂ ರೇಷನ್ ಕಾರ್ಡ್ ಪಡೆದವರು ಸೇರಿ ವಿವಿಧ ರೀತಿಯ ಕಾರ್ಡ್ ಗಳನ್ನು ರದ್ದುಗೊಳಿಸಲಾಗುತ್ತದೆ. ಹಾಗಾದರೆ, ನಿಮ್ಮ ಕಾರ್ಡ್ ಕೂಡ ರದ್ದಾಗುತ್ತದೆಯೇ? ರದ್ದಾಗಿದೆಯೇ, ಇಲ್ಲವೇ ಎಂಬುದರ ಸ್ಟೇಟಸ್ ತಿಳಿಯೋದು ಎಂಬುದರ ವಿವರಣೆ ಇಲ್ಲಿದೆ.
ಸ್ಟೇಟಸ್ ಚೆಕ್ ಮಾಡೋದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ https://ahara.karnataka.gov.in/ ಗೆ ಭೇಟಿ ನೀಡಿ
ಪಡಿತರ ಚೀಟಿ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
ರದ್ದು/ತಡೆ ಹಿಡಿಯಲಾದ ಪಡಿತರ ಚೀಟಿಯ ಪಟ್ಟಿಯನ್ನು ಆಯ್ಕೆಮಾಡಿಕೊಳ್ಳಿ
ವಿವರಗಳನ್ನು ಭರ್ತಿ ಮಾಡಿ, ಕಾಪ್ಚಾ ನಮೂದಿಸಿ, Go ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ
ಆಯಾ ತಿಂಗಳ ಅನ್ವಯ ರದ್ದುಪಡಿಸಿದ ರೇಷನ್ ಕಾರ್ಡ್ ಗಳ ಪಟ್ಟಿ ಸಿಗುತ್ತದೆ



















