ಬೆಂಗಳೂರು : ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರ ಯೋಜನೆ ಜಾರಿಯಾಗಲಿದೆ.
ಸರ್ಕಾರಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳ ರೋಗಿಗಳಿಗೆ ವಿಶೇಷ ಆಹಾರ ಸೇವೆ ಜಾರಿಯಾಗಿದ್ದು, ಮುಖ್ಯವಾಗಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗಾಗಿ ಈ ಯೋಜನೆ ಜಾರಿ ಮಾಡಲಾಗಿದೆ.
ಈ ಹಿಂದೆ ಸಾಮಾನ್ಯ ಆಹಾರ ನೀಡಲಾಗುತಿತ್ತು, ಇದು ರೋಗಿಗಳ ಪೌಷ್ಟಿಕಾಂಶದ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗದೆ ಇರುವ ಕಾರಣಕ್ಕೆ, ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪೌಷ್ಟಿಕಾಂಶ ಪೂರೈಸಲು ಕರ್ನಾಟಕ ಸರ್ಕಾರ ಸಿದ್ದತೆ ಮಾಡುತ್ತಿದೆ. ರೋಗಿಗಳ ವೈದ್ಯಕೀಯ ಅಗತ್ಯಗಳ ಆಧಾರದ ಮೇಲೆ ಆಹಾರ ವಿಂಗಡಣೆ ಮಾಡಲಾಗುತ್ತದೆ.
ಮೊದಲ ಹಂತದಲ್ಲಿ ಸಿ.ವಿ ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ನಗರದ ಮೂರು ಕಡೆ ಯೋಜನೆ ಪ್ರಾರಂಭವಾಗಲಿದ್ದು, ಪ್ರತಿ ಆಸ್ಪತ್ರೆಗಳಲ್ಲಿ 250 ರೋಗಿಗಳಿಗೆ ಪ್ರತಿದಿನ ಆಹಾರ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಗಾಗಿ ಆರೋಗ್ಯ ಇಲಾಖೆ ಇಸ್ಕಾನ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, 9 ತಿಂಗಳ ಅವಧಿಗೆ 1,37,45,700 ರೂ. ವೆಚ್ಚವನ್ನು ಆರೋಗ್ಯ ಇಲಾಖೆ ಭರಿಸುತ್ತೆದೆ.
ರೋಗಿಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಬೆಳಗ್ಗೆ ಹಾಗೂ ಸಂಜೆ ಲಘು ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಆರೋಗ್ಯ ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ.