ಬೆಂಗಳೂರು: ಬೆಂಗಳೂರಿಗರಿಗೆ ದೀಪಾವಳಿ ಉಡುಗೊರೆ ಎಂದು ಜನರಿಗೆ ಬಿ ಖಾತೆ, ಎ ಖಾತೆ ಎಂದು ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿ ಖಾತೆಯಿಂದ ಎ ಖಾತೆ ಮಾಡಿಕೊಡುವ ಸರ್ಕಾರದ ಯೋಜನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕುಮಾರಸ್ವಾಮಿ, ಇದು ಲೂಟಿ ಹೊಡೆಯುವ ಯೋಜನೆಯಾಗಿದೆ. ಬಿ ಖಾತೆಯಿಂದ ಎ ಖಾತಾ ಮಾಡಿಸುವುದು ಜನರಿಗೆ ಟೋಪಿ ಹಾಕುವ ಕೆಲಸ. ಇದರಲ್ಲಿ ದುಡ್ಡು ಮಾಡುವ ಪ್ಲ್ಯಾನ್ ಇದೆ. 2007 ರಲ್ಲಿ ನಮ್ಮ ಸರ್ಕಾರ ಇದ್ದಾಗ ಖಾತಾ ಬದಲಾವಣೆಗೆ ಆದೇಶ ಆಗಿತ್ತು. ಅನೇಕ ಕೋರ್ಟ್‌ಗಳು ಇದರ ಬಗ್ಗೆ ಆದೇಶ ಮಾಡಿವೆ. ಈಗ ಈ ಸರ್ಕಾರದವರು ಲೂಟಿ ಮಾಡಲು ಬಿ ಖಾತೆ, ಎ ಖಾತೆ ಎಂದು ಶುರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
1997 ರಲ್ಲಿ 30×40 ಸೈಟ್ ಖಾತೆ ಮಾಡಿಸಿಕೊಳ್ಳಲು 12,263 ರೂ. ಇತ್ತು. ಈಗ ಅದರಲ್ಲೇ ಲಕ್ಷಾಂತರ ರೂ. ಲೂಟಿ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ. 2007 ರಲ್ಲಿ ನನ್ನ ಸರ್ಕಾರ ಇದ್ದಾಗಲೇ ಖಾತೆ ಮಾಡಿಕೊಡುವ ನಿರ್ಧಾರ ಆಗಿದೆ. ಆಗಲೇ ಹಣವನ್ನು ಬಿಬಿಎಂಪಿ ಖಾತೆ ಮಾಡಿಕೊಡಲು ಹಣ ಪಡೆದಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮತ್ತು ನಾಡಿನ ಜನರು ಎರಡು ವರ್ಷ ತಡೆಯಿರಿ. ಯಾರು ಹಣ ಕೊಟ್ಟು ಖಾತೆ ಮಾಡಿಸಿಕೊಳ್ಳಬೇಕು ಅಂತಿದ್ದೀರೋ, ಎರಡು ವರ್ಷ ಆದ ಮೇಲೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಹಿಂದೆ ಇದ್ದ ಸಿಸ್ಟಮ್‌ನಲ್ಲಿ ಸರಳವಾಗಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡುತ್ತೀವಿ. ಎರಡು ವರ್ಷ ಯಾರು ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ ಕೆಲಸ ಮಾಡುತ್ತೀವಿ ಎಂದು ಜನತೆಗೆ ಕರೆ ಕೊಟ್ಟಿದ್ದಾರೆ.


















