ಬೆಂಗಳೂರು: ದೇಶದ ವಾಹನಗಳ ಮಾಲೀಕರಿಗೆ ಕೇಂದ್ರ ಸರ್ಕಾರ ಕಹಿ ಸುದ್ದಿ ನೀಡಿದೆ. ವಾಹನಗಳ ಫಿಟ್ನೆಸ್ ಪ್ರಮಾಣಪತ್ರದ ಮೇಲಿನ ಶುಲ್ಕವನ್ನು 10 ಪಟ್ಟು ಏರಿಕೆ ಮಾಡಿ (Fitness Test Fees) ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಇದರಿಂದಾಗಿ ದೇಶದ ಕೋಟ್ಯಂತರ ವಾಹನಗಳ ಮಾಲೀಕರ ಜೇಬಿಗೆ ಹೊರೆಯಾಗಲಿದೆ. ವಾಹನಗಳ ಅವಧಿಯ ಆಧಾರದ ಮೇಲೆ ಫಿಟ್ನೆಸ್ ಪರೀಕ್ಷೆ ಮಾಡಿಸಲು ಹೆಚ್ಚಿನ ಶುಲ್ಕವನ್ನು ಭರಿಸಬೇಕಾಗುತ್ತದೆ.
10-15 ವರ್ಷ ಹಳೆಯ ವಾಹನಗಳು, 15-20 ವರ್ಷ ಹಾಗೂ 20 ವರ್ಷಕ್ಕಿಂತ ಹಳೆಯ ವಾಹನಗಳು ಎಂದು ವಿಭಾಗಿಸಲಾಗಿದೆ. 20 ವರ್ಷಕ್ಕಿಂತ ಹಳೆಯದಾದ ಟ್ರಕ್ ಅಥವಾ ಬಸ್ ಗಳ ಫಿಟ್ನೆಸ್ ಟೆಸ್ಟ್ ಮಾಡಿಸಲು ಈಗ ಎರಡೂವರೆ ಸಾವಿರ ರೂಪಾಯಿ ಬದಲು 25 ಸಾವಿರ ರೂಪಾಯಿ ನೀಡಬೇಕಾಗುತ್ತದೆ. 20 ವರ್ಷಕ್ಕಿಂತ ಹಳೆಯದಾದ ಲಘು ವಾಹನಗಳಿಗೆ 15 ಸಾವಿರ ರೂಪಾಯಿ ಹಾಗೂ ತ್ರಿಚಕ್ರ ವಾಹನಗಳಿಗೆ 7 ಸಾವಿರ ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
10ರಿಂದ 15 ವರ್ಷದೊಳಗಿನ ಬೈಕ್ ಗಳಿಗೆ 400 ರೂಪಾಯಿ, ಲಘು ವಾಹನಗಳಿಗೆ 600 ರೂಪಾಯಿ ಹಾಗೂ ಮಧ್ಯಮ ಮತ್ತು ಭಾರಿ ಗಾತ್ರದ ವಾಹನಗಳಿಗೆ 1 ಸಾವಿರ ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹಾಗೆಯೇ, 20 ವರ್ಷಕ್ಕಿಂತ ಹೆಚ್ಚಿನ ಅವಧಿಯ ದ್ವಿಚಕ್ರ ವಾಹನಗಳ ಫಿಟ್ನೆಸ್ ಪರೀಕ್ಷೆಗೆ ಈಗ 600 ರೂಪಾಯಿ ಬದಲು 2 ಸಾವಿರ ರೂಪಾಯಿ ನೀಡಬೇಕಾಗುತ್ತದೆ.
ಕೇಂದ್ರೀಯ ಮೋಟಾರು ವಾಹನ ನಿಯಮಗಳ (5ನೇ ತಿದ್ದುಪಡಿ) ಅನ್ವಯ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಮಾರಾಟ ಮಾಡಿ, ಅವುಗಳ ಬದಲಿಗೆ ಜನ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರವು ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ಗಣನೀಯವಾಗಿ ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಟ್ರಯಂಫ್‌ನಿಂದ ಸ್ಟ್ರೀಟ್ ಟ್ರಿಪಲ್ 765 RX ಮತ್ತು ಲಿಮಿಟೆಡ್-ರನ್ Moto2 ಎಡಿಷನ್ ಅನಾವರಣ



















