ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಯ ಜಿಲ್ಲಾ ಹಾಗೂ ತಾಲೂಕು ಶಾಖೆಗಳ ಪದಾಧಿಕಾರಿಗಳ ಚುನಾವಣೆ ಅಧಿಸೂಚನೆ ಪ್ರಕಟಿಸಲಾಗಿದೆ.
ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕ ಸ್ಥಾನದ ಚುನಾವಣೆಗಳು ಅಕ್ಟೋಬರ್ 9 ರಿಂದ 28ರ ವರೆಗೆ ನಡೆಯಲಿವೆ ಎಂದು ಘೋಷಣೆಯಾಗಿದೆ. ತಾಲೂಕು ಶಾಖೆಗಳ ತಾಲೂಕು ಅಧ್ಯಕ್ಷ ಸ್ಥಾನ, ಯೋಜನಾ ಶಾಖೆಗಳ ಅಧ್ಯಕ್ಷ ಸ್ಥಾನ, ತಾಲೂಕು-ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಅಕ್ಟೊಬರ್ 30 ರಿಂದ ನವೆಂಬರ್ 16ರ ವರೆಗೆ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಅಕ್ಟೋಬರ್ 28 ರಿಂದ ನವೆಂಬರ್ 16ರ ವರೆಗೆ ಹಾಗೂ ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆ ನವೆಂಬರ್ 19 ರಿಂದ ಡಿಸೆಂಬರ್ 4 ರ ವರೆಗೆ ನಡೆಯಲಿವೆ. ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರ ಮತಕ್ಷೇತ್ರವಾರು ಚುನಾವಣೆ ಸೆ. 17 ರಿಂದ ಡಿಸೆಂಬರ್ 4ರ ವರೆಗೆ ಹಾಗೂ ರಾಜ್ಯ ಸಂಘದ ರಾಜ್ಯಾದ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆ ಡಿಸೆಂಬರ್ 9 ರಿಂದ ಡಿಸೆಂಬರ್ 27ರ ವರೆಗೆ ನಡೆಯಲಿದೆ.
ಸಂಘದ ತಾಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರು ಮತ್ತು ಪದಾಧಿಕಾರಿಗಳ ಚುನಾವಣೆ ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರು ಮತ್ತು ರಾಜ್ಯ ಸಂಘದ ಪದಾಧಿಕಾರಿಗಳ ಚುನಾವಣೆಗಳನ್ನು ಸಂಘದ ಶಾಖೆಗಳೇ ನಿಗದಿ ಪಡಿಸುವ ಸ್ಥಳಗಳಲ್ಲಿ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.