ನವದೆಹಲಿ : ತಂತ್ರಜ್ಞಾನ ದಿಗ್ಗಜ ಗೂಗಲ್ ತನ್ನ ಬಹುನಿರೀಕ್ಷಿತ ‘ಪಿಕ್ಸೆಲ್ 10a‘ (Pixel 10a) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪಿಕ್ಸೆಲ್ 10 ಸರಣಿಯ ಅತ್ಯಂತ ಕೈಗೆಟುಕುವ ದರದ ಫೋನ್ ಇದಾಗಿದ್ದು, ಪ್ರೀಮಿಯಂ ವೈಶಿಷ್ಟ್ಯಗಳನ್ನು ಮಧ್ಯಮ ವರ್ಗದ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತ ವೈಶಿಷ್ಟ್ಯಗಳು, ಸುಧಾರಿತ ಕ್ಯಾಮೆರಾ ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಯ ಭರವಸೆಯೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಂದಿದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಪಿಕ್ಸೆಲ್ 10a ಸ್ಮಾರ್ಟ್‌ಫೋನ್‌ನ ಬೆಲೆ ₹49,999 ಎಂದು ನಿಗದಿಪಡಿಸಲಾಗಿದೆ. ಫೆಬ್ರವರಿ 18ರಿಂದಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಮಾರ್ಚ್ 6, 2026ರಿಂದ ಫೋನ್ ಮಾರಾಟಕ್ಕೆ ಲಭ್ಯವಿರಲಿದೆ. ಲಾವೆಂಡರ್, ಅಬ್ಸಿಡಿಯನ್, ಫಾಗ್ ಮತ್ತು ಬೆರ್ರಿ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.
ಪ್ರಮುಖ ಆಫರ್‌ಗಳು
ಬಿಡುಗಡೆಯ ಕೊಡುಗೆಯಾಗಿ, ಆಯ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 3,000 ರೂಪಾಯಿ ಕ್ಯಾಶ್‌ಬ್ಯಾಕ್ ಮತ್ತು 3,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಅಲ್ಲದೆ, ಗೂಗಲ್ ಪಿಕ್ಸೆಲ್ ಅಪ್‌ಗ್ರೇಡ್ ಪ್ರೋಗ್ರಾಂ ಅಡಿಯಲ್ಲಿ ಮಾಸಿಕ 2,083 ರೂಪಾಯಿ ಕಂತುಗಳ ಮೂಲಕವೂ (EMI) ಈ ಫೋನ್ ಖರೀದಿಸಬಹುದು.
ಡಿಸ್‌ಪ್ಲೇ ಮತ್ತು ವಿನ್ಯಾಸ
ಪಿಕ್ಸೆಲ್ 10a ಫೋನ್ 6.3 ಇಂಚಿನ ಆಕ್ಚುವಾ (Actua) ಡಿಸ್‌ಪ್ಲೇಯನ್ನು ಹೊಂದಿದ್ದು, 3,000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡುತ್ತದೆ. ಇದು ಪಿಕ್ಸೆಲ್ ‘ಎ’ ಸರಣಿಯಲ್ಲೇ ಅತ್ಯಂತ ಪ್ರಕಾಶಮಾನವಾದ ಡಿಸ್‌ಪ್ಲೇ ಎನಿಸಿಕೊಂಡಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಮತ್ತು IP69 ಧೂಳು ಮತ್ತು ಜಲ ನಿರೋಧಕ ಸಾಮರ್ಥ್ಯವನ್ನು ಇದು ಹೊಂದಿದೆ.
ಕ್ಯಾಮೆರಾ ಮತ್ತು ಎಐ ವೈಶಿಷ್ಟ್ಯಗಳು
ಫೋಟೋಗ್ರಫಿಗಾಗಿ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 48 ಮೆಗಾಪಿಕ್ಸೆಲ್ ವೈಡ್ ಸೆನ್ಸಾರ್ ಮತ್ತು 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಇದರಲ್ಲಿವೆ. ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ‘ಕ್ಯಾಮೆರಾ ಕೋಚ್’ ಮತ್ತು ‘ಆಟೋ ಬೆಸ್ಟ್ ಟೇಕ್’ ನಂತಹ ಎಐ ಫೀಚರ್‌ಗಳು ಫೋಟೋ ತೆಗೆಯುವ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲಿವೆ.
ಬ್ಯಾಟರಿ ಮತ್ತು ಪ್ರೊಸೆಸರ್
ಗೂಗಲ್ ಟೆನ್ಸರ್ G4 ಪ್ರೊಸೆಸರ್ ಮೂಲಕ ಈ ಫೋನ್ ಕಾರ್ಯನಿರ್ವಹಿಸಲಿದ್ದು, ಟೈಟಾನ್ M2 ಸೆಕ್ಯುರಿಟಿ ಚಿಪ್ ಅಳವಡಿಸಲಾಗಿದೆ. 5,100mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 30 ಗಂಟೆಗಳಿಗೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆಂಡ್ರಾಯ್ಡ್ 16 ಓಎಸ್ ಹೊಂದಿರುವ ಈ ಫೋನ್‌ಗೆ 7 ವರ್ಷಗಳ ಒಎಸ್ ಮತ್ತು ಭದ್ರತಾ ಅಪ್‌ಡೇಟ್ ನೀಡುವುದಾಗಿ ಗೂಗಲ್ ಭರವಸೆ ನೀಡಿದೆ.
ಇದನ್ನೂ ಓದಿ : ವಸತಿ ನಿಲಯದ ಅವ್ಯವಸ್ಥೆ | ಬೆಳಗಿನ ಉಪಹಾರ ಹಿಡಿದು ಶಾಸಕರ ಮನೆಗೆ ಬಂದ ವಿದ್ಯಾರ್ಥಿನಿಯರು



















