ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಯುಗಾರಂಭವಾಗಿದೆ. ಇಂದಿನಿಂದ ದೇಶದಲ್ಲಿ ಮೂರು ಹೊಸ ಕಾನೂನು ಜಾರಿಯಾಗಿವೆ. ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ) 2024ನೇ ಜುಲೈ 1ರಂದು ದೇಶಾದ್ಯಂತ ಜಾರಿಯಾಗಿದೆ.
ಈ ಮೂರು ಕಾನೂನುಗಳು ಇನ್ನು ಮುಂದೆ ಇಂಡಿಯನ್ ಪೀನಲ್ ಕೋಡ್ (ಐಪಿಸಿ), ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ (ಸಿಆರ್‌ಪಿಸಿ) ಮತ್ತು ಎವಿಡೆನ್ಸ್ ಆಕ್ಟ್ ಗಳ ಸ್ಥಾನ ತುಂಬಲಿವೆ. ಜಾಗವನ್ನು ತುಂಬಲಿವೆ. ದೇಶದ ಯಾವುದೇ ಮೂಲೆಯಲ್ಲೂ ದೂರು ನೀಡುವ ಕ್ರಮವಾದ ಝೀರೋ ಎಫ್‌ಐಆರ್, ಆನ್‌ಲೈನ್ ಮಾಧ್ಯಮದ ಮೂಲಕವೂ ಪೊಲೀಸರಿಗೆ ದೂರು ನೀಡುವ ಸೌಲಭ್ಯ, ಎಸ್‌ಎಂಎಸ್ ನಂಥ ಡಿಜಿಟಲ್ ಮಾಧ್ಯಮದ ಮೂಲಕವೂ ಸಮನ್ಸ್ ನೀಡುವ ವ್ಯವಸ್ಥೆ ಸೇರಿದಂತೆ ಈ ಮೂರು ಕಾನೂನುಗಳು ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿವೆ. ಇದರಿಂದಾಗಿ ಸಾಮಾನ್ಯರು ಕೂಡ ಯಾವುದೇ ಒತ್ತಡ, ತೊಂದರೆ ಇಲ್ಲದೆ ದೂರು ದಾಖಲಿಸಿ, ನ್ಯಾಯ ಪಡೆಯಬಹುದು. ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್ ಗಳಿಗೂ ಸಂಕಷ್ಟ ಬಂದೋದಗುವಂತಾಗಿದೆ. ಫೋನಿಗೆ ಸಮನ್ಸ್ ಬಂತೆಂದರೆ ಓಡೋಡಿ ಕೋರ್ಟ್ ಗೆ ಬಂದು ಶರಣಾಗಬೇಕು. ಇಲ್ಲವಾದರೆ, ಅಪಾಯ ಕಟ್ಟಿಟ್ಟ ಬುತ್ತಿ.

ಹೊಸ ಕಾನೂನುಗಳು ಜಾರಿಗೆ ಬಂದರೆ ಪ್ರತಿಯೊಬ್ಬರಿಗೂ ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ದೇಶದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಇನ್ನೊಂದೆಡೆ ವಿಪಕ್ಷಗಳು ಇದನ್ನು ವಿರೋಧಿಸಿವೆ. ಹಳೆಯ ಕಾನೂನುಗಳು ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದವು. ಈಗ ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಪ್ರಮುಖ ಕಾನೂನುಗಳ ಉದ್ದೇಶ ಶಿಕ್ಷೆ ನೀಡುವುದಲ್ಲ, ಬದಲಿಗೆ ನ್ಯಾಯ ಒದಗಿಸುವುದಾಗಿದೆ. ಮೊದಲ ಬಾರಿಗೆ, ಭಾರತೀಯತೆಯ ಅಸ್ಮಿತೆಯೊಂದಿಗೆ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳ ಮೂಲಕ, ನಮ್ಮದೇ ಆದ ಅಪರಾಧ ನ್ಯಾಯ ವ್ಯವಸ್ಥೆಯು ದೇಶದಿಂದ, ದೇಶಕ್ಕಾಗಿ ಮತ್ತು ಭಾರತೀಯ ಸಂಸತ್ತಿನಿಂದ ರಚಿಸಲ್ಪಟ್ಟ ವ್ಯವಸ್ಥೆಯಿಂದ ನಡೆಸಲ್ಪಡುತ್ತದೆ.

ಜಾರಿಯಾಗಿರುವ ಹೊಸ ಭಾರತೀಯ ದಂಡ ಸಂಹಿತೆ ಬದಲಿಗೆ ಬರಲಿರುವ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯು ಹಿಂದಿನ 511 ಸೆಕ್ಷನ್‌ಗಳ ಬದಲಿಗೆ 358 ಸೆಕ್ಷನ್ ಗಳನ್ನು ಹೊಂದಿವೆ. ಇಲ್ಲಿ ಬರೋಬ್ಬರಿ 175 ಸೆಕ್ಷನ್‌ಗಳನ್ನು ಬದಲಿಸಿ, 8 ಹೊಸ ಸೆಕ್ಷನ್‌ಗಳನ್ನು ಸೇರಿಸಿ, 22 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈಗ 513 ಸೆಕ್ಷನ್‌ಗಳನ್ನು ಹೊಂದಿದೆ. ಹಳೆಯ ಕಾನೂನಿನ 160 ಸೆಕ್ಷನ್‌ಗಳನ್ನು ಬದಲಾಯಿಸಲಾಗಿದೆ. ಅದರಲ್ಲಿ 9 ಹೊಸ ಸೆಕ್ಷನ್ ಸೇರಿಸಿ, 9 ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಸಾಕ್ಷಿ ಸಂಹಿತೆ ಹಿಂದಿನ 167ರ ಬದಲಿಗೆ 170 ವಿಭಾಗಗಳನ್ನು ಹೊಂದಿರುತ್ತದೆ. 23 ವಿಭಾಗಗಳನ್ನು ಬದಲಾಯಿಸಲಾಗಿದೆ. ಒಂದು ಹೊಸ ವಿಭಾಗ ಸೇರಿಸಲಾಗಿದೆ ಮತ್ತು 5 ವಿಭಾಗಗಳನ್ನು ರದ್ದುಗೊಳಿಸಲಾಗಿದೆ.
ಈ ಹೊಸ ಕಾನೂನುಗಳ ಅನುಷ್ಠಾನದ ನಂತರ ಎಫ್‌ಐಆರ್‌ನಿಂದ ನ್ಯಾಯಾಲಯದ ತೀರ್ಪಿನವರೆಗೆ, ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ನಲ್ಲಿರುತ್ತದೆ. ಭಾರತವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅತಿ ಹೆಚ್ಚು ಬಳಸುವ ದೇಶವಾಗಲಿದೆ. ಈ ಕಾನೂನುಗಳು ತಾರೀಖ್-ಪೆ-ತಾರೀಖ್ ಅಂದರೆ, ಪದೇಪದೆ ವಿಚಾರಣೆ ಮುಂದೂಡುವುದು ಪ್ರವೃತ್ತಿಗೆ ಅಂತ್ಯ ಹಾಡುವ ಜತೆಗೆ ಮೂರು ವರ್ಷಗಳಲ್ಲಿ ನ್ಯಾಯವನ್ನು ನೀಡುವ ನ್ಯಾಯಾಂಗ ವ್ಯವಸ್ಥೆಯ ಭರವಸೆ ನೀಡಿವೆ. ಏಕೆಂದರೆ, ಹಿಂದೆ ಯಾವುದೇ ಚಿಕ್ಕ ಕೇಸ್ ಆಗಲಿ, ಅದನ್ನು ಯಾವುದಾದರೂ ಕಾರಣಕ್ಕೆ ಹಿಗ್ಗಿಸಿ ಹತ್ತಾರು ವರ್ಷಗಳ ವರೆಗೆ ನಡೆಸಿದ್ದ ಉದಾಹರಣೆಗಳು ಇದ್ದವು. ಹೀಗಾಗಿಯೇ ಈ ಹೊಸ ಕಾನೂನು ತ್ವರಿತ ನ್ಯಾಯ ಒದಗಿಸುತ್ತವೆ.
ವಸಾಹತುಶಾಹಿ ಕಾನೂನುಗಳನ್ನು ಕೊನೆಗೊಳಿಸಲೆಂದು ಭಾರತೀಯರೇ ಭಾರತೀಯರಿಗಾಗಿ ಭಾರತೀಯ ಸಂಸತ್ ರೂಪಿಸಿದ ಮೂರು ಕಾನೂನುಗಳಿವು. ನಾವು ಕೇವಲ ಕಾನೂನುಗಳ ಹೆಸರು ಬದಲಾಯಿಸಿಲ್ಲ. ಇವುಗಳ ಸ್ವರೂಪ, ಅವುಗಳ ಆತ್ಮ ಮತ್ತು ಚೈತನ್ಯವೂ ಭಾರತೀಯವೇ ಆಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೂ ವಿರೋಧ ಪಕ್ಷಗಳು ಮಾತ್ರ ಇವುಗಳನ್ನು ವಿರೋಧಿಸುತ್ತಿವೆ. ಏನೇ ಆಗಲಿ, ಕಾನೂನು ಜನರಿಗೆ ತ್ವರಿತ ನ್ಯಾಯ ನೀಡಲಿ, ಬಡವರಿಗೆ ನ್ಯಾಯ ಸಿಗುವಂತಾಗಲಿ. ನ್ಯಾಯ ಎಲ್ಲರನ್ನೂ ಸಮಾನವಾಗಿ ನೋಡಲಿ…ಅಲ್ಲವೇ?