ಬೆಂಗಳೂರು: ಇದೇನಿದ್ದರೂ ಆನ್‌ಲೈನ್ ಪೇಮೆಂಟ್ ಕಾಲ. ಮೊಬೈಲ್‌ನಲ್ಲಿಯೇ ಲಕ್ಷಾಂತರ ರೂಪಾಯಿ ವರ್ಗಾವಣೆ ಮಾಡುವ, ಒಂದು ಕಪ್ ಚಹಾ ಕುಡಿದರೂ ಯುಪಿಐ ಮೂಲಕ ಪೇಮೆಂಟ್ ಮಾಡುವ ಕಾಲ. ಇದೇ ಕಾರಣಕ್ಕಾಗಿ ನಾವಿಂದು ಬ್ಯಾಂಕುಗಳಿಗೆ ಹೋಗುವುದನ್ನೇ ಮರೆತಿದ್ದೇವೆ. ಹಾಗೆಯೇ, ಬ್ಯಾಂಕ್‌ಗಳಿಗೆ ಹೋಗಬೇಕು ಎಂದರೆ ಉದಾಸೀನರಾಗುತ್ತೇವೆ. ಕೆಲವೊಮ್ಮೆ ಕೆಲಸದ ಒತ್ತಡದಿಂದಲೂ ಬ್ಯಾಂಕುಗಳಿಗೆ ಹೋಗಲು ಆಗುವುದಿಲ್ಲ. ಇದನ್ನು ಅರಿತುಕೊಂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಹೊಸ ಐತಿಹಾಸಿಕ ಹೆಜ್ಜೆ ಇರಿಸಿದೆ.
ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆ ತೆರೆಯಲು ಇನ್ನು ಬ್ಯಾಂಕಿನ ಬ್ರ್ಯಾಂಚುಗಳಿಗೆ ತೆರಳಬೇಕಿಲ್ಲ. ಏಕೆಂದರೆ, ಆನ್ ಲೈನ್ ಮೂಲಕವೇ ಪಿಪಿಎಫ್ ಖಾತೆ ತೆರೆಯಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವಕಾಶ ನೀಡಿದೆ. ಇದರಿಂದಾಗಿ ಪಿಎನ್ ಬಿಯ ಕೋಟ್ಯಂತರ ಗ್ರಾಹಕರಿಗೆ ಭಾರಿ ಅನುಕೂಲವಾಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಪಿಪಿಎಫ್ ಖಾತೆಗೆ ಶೇ.7.1ರಷ್ಟು ಬಡ್ಡಿದರ ನೀಡಲಾಗುತ್ತದೆ.
ಡು ಇಟ್ ಯುವರ್ ಸೆಲ್ಫ್ ಅಥವಾ Do-It-Yourself (DIY) ಎಂಬ ಆಯ್ಕೆಯ ಮೂಲಕ ಗ್ರಾಹಕರು ಈಗ ಆನ್ ಲೈನ್ ಮೂಲಕವೇ ಪಿಪಿಎಫ್ ಖಾತೆ ತೆರೆಯಬಹುದಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಆ್ಯಪ್, ಇಂಟರ್ ನೆಟ್ ಬ್ಯಾಂಕಿಗ್ ಪೋರ್ಟಲ್ ಮೂಲಕ ಸುಲಭವಾಗಿ ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ಅಲ್ಲಿಯೇ ಹೂಡಿಕೆಯ ಮೊತ್ತ, ರಿಟರ್ನ್ಸ್ ಲೆಕ್ಕಾಚಾರ, ಆಟೋ ಡೆಬಿಟ್ ಸೇರಿ ಹಲವು ಸೌಕರ್ಯಗಳು ಲಭ್ಯ ಇವೆ.
ಆನ್ ಲೈನ್ ನಲ್ಲಿಯೇ ನೀವು ಬ್ರ್ಯಾಂಚ್ ಸೆಲೆಕ್ಷನ್ ಮಾಡಬಹುದು. ಆಧಾರ್ ಆಧಾರಿತ ದೃಢೀಕರಣವೂ ಆನ್ ಲೈನ್ ನಲ್ಲಿಯೇ ಆಗಲಿದೆ. ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್ ಪೋರ್ಟ್ (ಇದ್ದರೆ), ಆಧಾರ್ ನಂಬರ್, ಎಲೆಕ್ಟ್ರಿಸಿಟಿ ಬಿಲ್, ರೇಷನ್ ಕಾರ್ಡ್ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳನ್ನು ಅಪ್ ಲೋಡ್ ಮಾಡುವ ಮೂಲಕ ಪಿಪಿಎಫ್ ಖಾತೆ ತೆರೆಯಬಹುದಾಗಿದೆ. ಹೀಗೆ ಆನ್ ಲೈನ್ ಮೂಲಕ ಖಾತೆ ತೆರೆಯುವುದರಿಂದ ಸುಲಭವಾಗಿ ಹೂಡಿಕೆ ಹಾಗೂ ವಿತ್ ಡ್ರಾ ಮಾಡಬಹುದಾಗಿದೆ.



















