ಬೆಂಗಳೂರು: ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 39 ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಹುದ್ದೆಗಳ (ADLR Jobs) ನೇಮಕಾತಿ ಪ್ರಕ್ರಿಯಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಕುರಿತು ಆದೇಶ ಹೊರಡಿಸಲಾಗುತ್ತದೆ.
ನೇಮಕಾತಿ ಕುರಿತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷವೇ 750 ಸರ್ಕಾರಿ ಸರ್ವೇಯರ್ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದರು. ಹುದ್ದೆ ಭರ್ತಿಗೆ ಈಗಾಗಲೇ ಕೆಪಿಎಸ್ ಸಿ ಪರೀಕ್ಷೆ ಮುಗಿಸಿ ಅಂತಿಮ ಪರೀಕ್ಷೆಯನ್ನು ಮೇ 10-11ಕ್ಕೆ ನಿಗದಿಪಡಿಸಿದೆ. ಸಂದರ್ಶನ ಇಲ್ಲದೆ ಮೆರಿಟ್ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಒಂದು ರೂಪಾಯಿಯೂ ಲಂಚಕ್ಕೆ ಆಸ್ಪದವಿಲ್ಲ. ಅಲ್ಲದೆ, ಖಾಲಿ ಇರುವ 39 ಎಡಿಎಲ್ ಆರ್ ಸ್ಥಾನಗಳನ್ನೂ ಭರ್ತಿ ಮಾಡಲು ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರದಲ್ಲಿ ಸಮರ್ಥ ಮಾನವ ಸಂಪನ್ಮೂಲ ಇಲ್ಲದೆ ಜನಪರ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಲಾಖೆಗೆ ಮತ್ತಷ್ಟ ಬಲ ತುಂಬಲು ಖಾಲಿ ಇರುವ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ನಿರ್ಧಾರ ಇಲಾಖೆಯನ್ನು ಮತ್ತಷ್ಟು ಜನಪರವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಕೂಡ ಖಾಲಿ ಇವೆ. ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಸರ್ಕಾರ ನೇಮಕ ಮಾಡಿಕೊಳ್ಳಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಸರ್ಕಾರವು ಇದುವರೆಗೆ ನೇಮಕಾತಿ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ.