ಮಧ್ಯಮ ವರ್ಗಕ್ಕೆ ಶೀಘ್ರವೇ ಗುಡ್ ನ್ಯೂಸ್: ಶುಭ ಸುದ್ದಿ ನೀಡಲು ಸಜ್ಜಾಗುತ್ತಿದೆಯಾ ಮೋದಿ ಸರ್ಕಾರ?
ಮಧ್ಯಮ ವರ್ಗಕ್ಕೆ ಶೀಘ್ರವೇ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಲಿದೆಯಾ? ಹೌದು. ಸಾಮಾನ್ಯನ ಜೇಬಿಗೆ ಬೀಳುತ್ತಿರುವ ಕತ್ತರಿಯನ್ನು ತಪ್ಪಿಸುವ ಚಿಂತನೆ ನಡೆದಿದೆ. ಇದರ ಭಾಗವಾಗಿಯೇ ಅಗತ್ಯ ವಸ್ತುಗಳ ಮೇಲಿನ ಜಿಎಸ್ ಟಿ ಹೊರೆಯನ್ನು ತಗ್ಗಿಸುವ ಪ್ರಸ್ತಾವನೆ ವಿತ್ತ ಸಚಿವರ ಮುಂದಿದೆ.
ಹೀಗಾಗಿ ಈಗಿರುವ ಕೆಲ ವಸ್ತುಗಳ ಮೇಲಿನ ಶೇ. 12ರಷ್ಟರ ಜಿಎಸ್ಟಿಯನ್ನು ಶೇಕಡ ಐದರ ವ್ಯಾಪ್ತಿಗೆ ತರುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲಾ ಈಗಿರುವ ಶೇ.12 ಜಿಎಸ್ ಟಿ ಸ್ಲ್ಯಾಬನ್ನೇ ರದ್ದು ಮಾಡುವ ಇನ್ನೊಂದು ಯೋಚನೆ ಕೂಡಾ ಇದೆ. ಒಂದೊಮ್ಮೆ ಈ ನಿರ್ಧಾರ ಅಧಿಕೃತವಾದರೆ, ಟೂತ್ ಪೇಸ್ಟ್, ಕೊಡೆ, ಹೊಲಿಗೆ ಯಂತ್ರ, ಕುಕ್ಕರ್, ಪಾತ್ರೆಗಳು, ಇಸ್ತ್ರಿ ಪೆಟ್ಟಿಗೆ, ಗೀಜರ್, ವಾಷಿಂಗ್ ಮಷಿನ್, ಬಟ್ಟೆ, ಸ್ಟೇಷನರಿ, ಲಸಿಕೆ, ಕೃಷಿ ಉಪಕರಣಗಳು ಅಗ್ಗವಾಗುವ ಸಾಧ್ಯತೆಗಳಿವೆ.
ಈ ತಿಂಗಳಾಂತ್ಯಕ್ಕೆ ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಒಂದೊಮ್ಮೆ ಈ ತೀರ್ಮಾನ ಅಂತಿಮವಾದರೆ, 2017ರ ಬಳಿಕ ಜಿಎಸ್ಟಿ ಜಾರಿ ವಿಚಾರದಲ್ಲಿ ಬಲು ದೊಡ್ಡ ಬದಲಾವಣೆ ಇದಾಗಿರಲಿದೆ ಅಂತಲೇ ವಿಶ್ಲೇಷಿಸಲಾಗುತ್ತಿದೆ.