ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ಹಲವು ರಾಜ್ಯಗಳ ತಂಬಾಕು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ವರ್ಜಿನಿಯಾ ತಂಬಾಕು ಬೆಳೆಯಲು ನೀಡುವ ಪರವಾನಗಿ ಅವಧಿಯನ್ನು ಒಂದು ವರ್ಷದ ಬದಲು ಮೂರು ವರ್ಷಗಳಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕ ಸೇರಿ ದೇಶದ ಸಾವಿರಾರು ತಂಬಾಕು ಬೆಳೆಗಾರರಿಗೆ ಅನುಕೂಲವಾಗಲಿದೆ.
ಜಗತ್ತಿನಲ್ಲಿ ಭಾರತವು ಎರಡನೇ ಅತಿ ದೊಡ್ಡ ತಂಬಾಕು ಬೆಳೆಗಾರ ಮತ್ತು ನಾಲ್ಕನೇ ಅತಿ ದೊಡ್ಡ ರಫ್ತು ರಾಷ್ಟ್ರವಾಗಿದೆ ಎಂದು 2023ರ ದಾಖಲೆಗಳಿಂದ ತಿಳಿದುಬಂದಿದೆ. 2024–25ರಲ್ಲಿ 16 ಸಾವಿರ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಲಾಗಿದೆ.
ಕೇಂದ್ರ ಸರ್ಕಾರದ ಆದೇಶದಿಂದ ದೇಶದ ಸುಮಾರು 83,500 ರೈತರಿಗೆ ಅನುಕೂಲವಾಗಲಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ರೈತರ ಸಮಯ ಉಳಿತಾಯವಾಗಲಿದೆ. ಪ್ರತಿ ವರ್ಷ ನೋಂದಣಿಗೆ ಕಚೇರಿ ಅಲೆಯುವುದು ತಪ್ಪಲಿದೆ.
“ಮುಂದಿನ ಮೂರು ವರ್ಷಗಳಿಗೆ ತಂಬಾಕು ಬೆಳೆಯಲು ಯೋಜನೆ ರೂಪಿಸುವುದು ಮತ್ತು ಮಾರುಕಟ್ಟೆ ಸೃಷ್ಟಿಸಲು ರೈತರು ಸಮಯವನ್ನು ಮೀಸಲಿಡಬಹುದು” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ತಿಳಿಸಿದ್ದಾರೆ.
ತಂಬಾಕು ಮಂಡಳಿಯ 1975ರ ಕಾಯ್ದೆಯಡಿ ವರ್ಜಿನಿಯಾ ತಂಬಾಕನ್ನು ನಿಯಂತ್ರಿಸಲಾಗಿದೆ. ಈ ಕಾಯ್ದೆ ಅನ್ವಯ ವರ್ಜಿನಿಯಾ ತಂಬಾಕು ಬೆಳೆಯುವವರು ಕ್ಷೇತ್ರವಾರು ತಮ್ಮ ಹೆಸರು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಂಡಳಿಯು ನೋಂದಣಿ ಪ್ರಮಾಣ ಪತ್ರ ವಿತರಣೆಯ ಹೊಣೆ ಹೊತ್ತಿದೆ.