ಬೆಂಗಳೂರು: ರಾಜ್ಯಕ್ಕೆ ಈಗಾಗಲೇ ಬೇಸಿಗೆ ಎಂಟ್ರಿ ಕೊಟ್ಟಾಗಿದೆ. ಜನರ ನೆತ್ತಿಯನ್ನು ಸೂರ್ಯ ಸುಡುತ್ತಿದ್ದಾನೆ. ಮನೆಯಲ್ಲಿ ಕುಳಿತರೂ ಸೆಕೆ, ಹೊರಗೆ ಹೋದರೂ ಸೆಕೆ ಎನ್ನುವಂತಾಗಿದೆ. ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿಯಲ್ಲಿ ಈ ವರ್ಷದಲ್ಲಿನ ಅತ್ಯಂತ ಗರಿಷ್ಠ ತಾಪಮಾನ ಕೂಡ ದಾಖಲಾಗಿತ್ತು. ಹೀಗಾಗಿ ಸಿಲಿಕಾನ್ ಸಿಟಿ ಮುಂದೆ ಇವಾಗಲೇ ಹಿಂಗೆ, ಇನ್ನೂ ಎರಡು ತಿಂಗಳು ಹೆಂಗಪ್ಪಾ ಅಂತಾ ಆಕಾಶ ನೋಡುವಂತಾಗಿತ್ತು. ಈ ಮಧ್ಯೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರನ್ನು ಹವಮಾನದ ವಿಷಯದಲ್ಲಿ ಎಲ್ಲರೂ ಪ್ರೀತಿ ಮಾಡುತ್ತಾರೆ. ಆದರೆ, ಇತ್ತೀಚೆಗೆ ಬಿಸಿಲು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣಾವಗುತ್ತಿತ್ತು. ಬೆಂಗಳೂರಿನ ತಾಪಮಾನ ಬೇಸಿಗೆಯಲ್ಲಿ 40ಕ್ಕೂ ಡಿಗ್ರಿಯವರೆಗೆ ಏರಿಕೆಯಾಗಿದ್ದು, ಸಹಜವಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿತ್ತು.
ಆದರೆ, ಈಗ ವಿಜ್ಞಾನಿಗಳು ಕೊಂಚ ನಿರಾಳತೆಯ ಸುದ್ದಿಯನ್ನು ಹೇಳಿದ್ದಾರೆ. ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಕಾಟ ಜಾಸ್ತಿ ಇರುವುದಿಲ್ಲ. ಬೇಸಿಗೆಯಲ್ಲಿ ಸಹಜವಾಗಿರುವಂತಹ ಬಿಸಿಲು ಈ ಬಾರಿ ಬೆಂಗಳೂರಿನಲ್ಲಿ ಇರಲಿದೆ. ಅಬ್ಬಬ್ಬಾ ಅಂದರೆ, 32ರಿಂದ 37 ಡಿಗ್ರಿಯವರೆಗೆ ತಾಪಮಾನ ಇರಬಹುದು. ಆದರೂ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ವಿಜ್ಞಾನಿ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಬೇಸಿಗೆಯಾದರೂ ಸುತ್ತಲಿನ ಜಿಲ್ಲೆಗಳಾದ ಮೈಸೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಕೊಡಗು ಮುಂತಾದ ಕಡೆಗಳಲ್ಲಿ ಆಗಾಗ ಮಳೆ ಸುರಿಯುತ್ತದೆ. ಅದೇ ಕಾರಣದಿಂದಾಗಿ, ಬೆಂಗಳೂರು ನಗರದಲ್ಲಿ ಬೇಸಿಗೆಯಲ್ಲಿ ಬಿಸಿಲು ಹಾಗೂ ತಾಪಮಾನ ನಿಯಂತ್ರಿತ ಮಟ್ಟದಲ್ಲಿ ಇರುತ್ತದೆ ಎಂದು ವಿಜ್ಞಾನಿ ಪಾಟೀಲ್ ಹೇಳಿದ್ದಾರೆ. ಇದನ್ನು ಕೇಳಿ ಈಗ ಬೆಂಗಳೂರಿಗರು ಸಂತಸ ಪಡುತ್ತಿದ್ದಾರೆ. ಆದರೂ ಎಚ್ಚರಿಕೆಯಿಂದ ಇರಬೇಕು