ಬೆಂಗಳೂರು : ಬಿಎಂಆರ್‌ಸಿಎಲ್ ಇಂದು ನಗರದಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ VS ಎಸ್‌ಆರ್‌ಹೆಚ್ ಈಪಿಎಲ್ ಪಂದ್ಯದ ಹಿನ್ನೆಲೆ ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಿದೆ. ಕ್ರಿಕೆಟ್ ಅಭಿಮಾನಿಗಳ ಸುಗಮ ಸಂಚಾರ ಹಾಗೂ ಟ್ರಾಫಿಕ್ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಚಾರಿ ಪೊಲೀಸರು ಸಹ ಪ್ರೇಕ್ಷಕರು ಹೆಚ್ಚು ಮೆಟ್ರೋ ಸೇವೆಯನ್ನೇ ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪಂದ್ಯದ ದಿನದಂದು ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಮುಕ್ತಾಯವಾಗುವ ಮೆಟ್ರೋ ಸೇವೆಯನ್ನು ತಡರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ನಗರದ ಪ್ರಮುಖ ಸಂಪರ್ಕ ಕೇಂದ್ರವಾದ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್‌ನಿಂದ ನಾಲ್ಕೂ ದಿಕ್ಕುಗಳಿಗೆ ಕೊನೆಯ ರೈಲು ಮಧ್ಯರಾತ್ರಿ 1:30ಕ್ಕೆ ಹೊರಡಲಿದೆ.
ಕೊನೆಯ ರೈಲು ಹೊರಡುವ ಸಮಯ
- ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12:30
- ಚಲ್ಲಘಟ್ಟ: ರಾತ್ರಿ 12:45
- ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12:45
- ಬೊಮ್ಮಸಂದ್ರ: ರಾತ್ರಿ 01:00
- ಆರ್.ವಿ. ರಸ್ತೆ: ರಾತ್ರಿ 02:00
ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿ ಈಗಾಗಲೇ ನಮ್ಮ ಮೆಟ್ರೋ ಕ್ಯೂಆರ್ ಕೋಡ್ (ಟೂ-ವೇ ಟ್ರಾವೆಲ್) ಮುದ್ರಿತವಾಗಿರುತ್ತದೆ. ಡಿಜಿಟಲ್ ಟಿಕೆಟ್ ಹೊಂದಿರುವವರು ಸಹ ಇದನ್ನು ಬಳಸಿ ಪ್ರಯಾಣಿಸಬಹುದು. ಕ್ರೀಡಾಂಗಣಕ್ಕೆ ಬರುವವರು ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ.
ವಾಹನ ದಟ್ಟಣೆ ನಿಯಂತ್ರಿಸಲು ನಗರದ 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರುಗಳಿಗೆ 60 ರೂ. ದರ ಇರಲಿದೆ. ಇದು ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಅನ್ವಯವಾಗುತ್ತದೆ.
ಇದನ್ನೂ ಓದಿ : ಸಾಕು ನಾಯಿ ಬೊಗಳಿತ್ತೆಂದು ಕುಡುಗೋಲಲ್ಲಿ ಬರ್ಬರವಾಗಿ ಕೊಚ್ಚಿ ಕೊಂದ ಕ್ರೂರಿ!



















