ನವದೆಹಲಿ: ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದವರಿಗೆ ಆದಾಯ ತೆರಿಗೆ ಇಲಾಖೆಯು ತಾತ್ಕಾಲಿಕ ರಿಲೀಫ್ ನೀಡಿದೆ. 2024ರ ಅಕ್ಟೋಬರ್ 1ಕ್ಕೂ ಮೊದಲು ಆಧಾರ್ ಕಾರ್ಡ್ ಪಡೆಯಲು ಅರ್ಜಿ ಹಾಕದವರಿಗೆ 2025ರ ಡಿಸೆಂಬರ್ 31ರವರೆಗೆ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. ತಡವಾಗಿ ಲಿಂಕ್ ಮಾಡುತ್ತಿರುವ ಕಾರಣ ಯಾವುದೇ ದಂಡವನ್ನೂ ವಿಧಿಸುವುದಿಲ್ಲ ಎಂಬುದಾಗಿ ಐಟಿ ಇಲಾಖೆಯು ಸೂಚಿಸಿದೆ.
ಲಿಂಕ್ ಮಾಡುವುದು ಹೇಗೆ?
ಪ್ಯಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ ಆಗಿರುವ www.incometax.gov.inಗೆ ಭೇಟಿ ನೀಡಬಹುದು. ನೀವು ಮೊದಲು ಪೋರ್ಟಲ್ ಗೆ ಲಾಗಿನ್ ಆಗಬೇಕು. ಅಥವಾ ನೋಂದಣಿ ಮಾಡಿಕೊಳ್ಳಬೇಕು. ಅಲ್ಲಿ ನೀವು ‘ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಹೆಸರಿನಂತಹ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ. ಒಟಿಪಿ ಪ್ರಕ್ರಿಯೆ ಬಳಿಕ ನೀವು ಲಿಂಕ್ ಮಾಡಿದಂತಾಗುತ್ತದೆ.
ಲಿಂಕ್ ಮಾಡದಿದ್ದರೆ ಏನಾಗುತ್ತದೆ?
2025ರ ಡಿಸೆಂಬರ್ 31 ರೊಳಗೆ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡಬೇಕು. ಡಿ.31ರ ನಂತರ ಲಿಂಕ್ ಮಾಡಲು ಹೋದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುವ ಸಾಧ್ಯತೆ ಕೂಡ ಇರುತ್ತದೆ. ಇದು ಬ್ಯಾಂಕ್ ವಹಿವಾಟುಗಳು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಿಕೆ ಮತ್ತು ಹೂಡಿಕೆಗಳಂತಹ ಹಣಕಾಸು ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಸಮಸ್ಯೆ ಎದುರಾಗಬಹುದು.
ಅಲ್ಲದೆ, ನೀವು ನಿಷ್ಕ್ರಿಯ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸಲು ಬಯಸಿದರೆ, ನೀವು ಮತ್ತೆ ದಂಡ ಪಾವತಿಸಬೇಕಾಗುತ್ತದೆ. ಅದಕ್ಕಾಗಿಯೇ ಗಡುವಿನೊಳಗೆ ಆಧಾರ್- ಪಾನ್ ಪೂರ್ಣಗೊಳಿಸುವುದು ಉತ್ತಮ. ಹೂಡಿಕೆ, ಆದಾಯ, ತೆರಿಗೆ ಸೇರಿ ಹಲವು ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಆದಾಯ ತೆರಿಗೆ ಇಲಾಖೆಯು ಪ್ಯಾನ್-ಆಧಾರ್ ಲಿಂಕ್ ಮಾಡಲು ಸೂಚಿಸಿದೆ.