ಬೆಂಗಳೂರು: ಖಾಸಗಿ ವಲಯದ ಉದ್ಯೋಗಿಗಳಿಗೆ ಉಳಿತಾಯ, ಪಿಂಚಣಿಯ ಸುರಕ್ಷತೆ ನೀಡುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ನೌಕರರ ಠೇವಣಿ ಸಂಬಂಧಿತ ವಿಮಾ ಯೋಜನೆ (EDLI) ಅನ್ವಯ ಉದ್ಯೋಗಿಗಳು ಪಡೆಯುತ್ತಿರುವ ಎರಡು ಸೌಲಭ್ಯಗಳ ನಿಯಮಗಳನ್ನು ಇಪಿಎಫ್ಒ ಸಡಿಲಗೊಳಿಸಿದೆ. ಇದರಿಂದ ನೌಕರರಿಗೆ ಅನುಕೂಲವಾಗಲಿದೆ.
ಹೊಸ ನಿಯಮದ ಪ್ರಕಾರ, ಪಿಎಫ್ ಅಕೌಂಟ್ ನಲ್ಲಿ ಹಣ ಕಡಿಮೆ ಇದ್ದರೂ, ಕುಟುಂಬಕ್ಕೆ 50 ಸಾವಿರ ರೂಪಾಯಿ ವಿಮಾ ಗ್ಯಾರಂಟಿ ಸಿಗಲಿದೆ. ಇದು ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಈ ಹಿಂದೆ, ಉದ್ಯೋಗಿಯ ಮರಣದ ನಂತರ ಅವರ ಕುಟುಂಬಕ್ಕೆ ವಿಮಾ ಸೌಲಭ್ಯ ಸಿಗಬೇಕಾದರೆ, ಅವರ ಪಿಎಫ್ ಖಾತೆಯಲ್ಲಿ ನಿಗದಿತ ಮೊತ್ತ ಇರಬೇಕಿತ್ತು. ಆದರೆ, ಕೆಲ ದಿನಗಳ ಹಿಂದೆ ಹೊರಡಿಸಿದ ಹೊಸ ಅಧಿಸೂಚನೆಯ ಪ್ರಕಾರ, ಆ ಷರತ್ತನ್ನು ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದ, ಪಿಎಫ್ ಸದಸ್ಯರು ಅಕಾಲಿಕವಾಗಿ ಮರಣ ಹೊಂದಿದರೂ, ಅವರ ಖಾತೆಯಲ್ಲಿ ಕಡಿಮೆ ಹಣ ಇದ್ದರೂ, 50 ಸಾವಿರ ರೂಪಾಯಿ ವಿಮಾ ಸುರಕ್ಷತೆ ಸಿಗಲಿದೆ.
ಒಂದು ವೇಳೆ ಉದ್ಯೋಗಿಯು ಸೇವೆಯಲ್ಲಿರುವಾಗಲೇ ಅಕಾಲಿಕವಾಗಿ ಮರಣ ಹೊಂದಿದರೆ, ಅವರ ಪಿಎಫ್ ಖಾತೆಯಲ್ಲಿ 50 ಸಾವಿರ ರೂ.ಗಿಂತ ಕಡಿಮೆ ಹಣವಿದ್ದರೂ, ಅವರ ಕುಟುಂಬಕ್ಕೆ ಕನಿಷ್ಠ 50 ಸಾವಿರ ರೂಪಾಯಿ ವಿಮಾ ಪ್ರಯೋಜನ ಸಿಗುವುದು ಈಗ ಖಚಿತ. ಇದು ಕಡಿಮೆ ಸಂಬಳ ಪಡೆಯುವ ಮತ್ತು ಬೇರೆ ಯಾವುದೇ ವಿಮೆ ಹೊಂದಿರದ ಅಸಂಘಟಿತ ವಲಯದ ಕಾರ್ಮಿಕರಿಗೆ ದೊಡ್ಡ ವರದಾನವಾಗಲಿದೆ ಎಂದೇ ಹೇಳಲಾಗುತ್ತಿದೆ.
ಇಪಿಎಫ್ಒದ ಹೊಸ ನಿಯಮದ ಪ್ರಕಾರ, ನೀವು ಒಂದು ಕಂಪನಿಯ ಕೆಲಸ ಬಿಟ್ಟು, ಇನ್ನೊಂದು ಕಂಪನಿ ಸೇರಿಕೊಳ್ಳಲು 60 ದಿನಗಳಿಗಿಂತ (2 ತಿಂಗಳು) ಕಡಿಮೆ ಸಮಯ ತೆಗೆದುಕೊಂಡರೆ, ಅದನ್ನು ಗ್ಯಾಪ್ ಎಂದು ಪರಿಗಣಿಸಲಾಗುವುದಿಲ್ಲ. ನಿಮ್ಮ ಹಳೆಯ ಮತ್ತು ಹೊಸ ಕೆಲಸದ ಅವಧಿಯನ್ನು ಒಟ್ಟಿಗೆ ಸೇರಿಸಿ, ನಿರಂತರ ಸೇವೆ ಎಂದು ಲೆಕ್ಕ ಹಾಕಲಾಗುತ್ತದೆ. ಇದರಿಂದ, ನೀವು ಕೆಲಸ ಬದಲಾಯಿಸಿದರೂ ವಿಮೆಯ ಸಂಪೂರ್ಣ ಪ್ರಯೋಜನದಿಂದ ವಂಚಿತರಾಗುವುದಿಲ್ಲ. ಹಾಗಾಗಿ, ಎರಡೂ ಹೊಸ ನಿಯಮಗಳು ಪಿಎಫ್ ಸದಸ್ಯರಿಗೆ ವರದಾನವಾಗಲಿವೆ.



















