ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚರಿಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ನಮ್ಮ ಯಾತ್ರಿ ಸೇರಿ 9 ಆ್ಯಪ್ ಗಳ ಮೂಲಕವೂ ಈಗ ಮೆಟ್ರೋ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದರೊಂದಿಗೆ ಗ್ರಾಹಕರಿಗೆ ಹೊಸ ಆಯ್ಕೆಗಳು ದೊರೆತಂತಾಗಿದ್ದು, ಸುಲಭವಾಗಿ ಟಿಕೆಟ್ ಬುಕ್ ಮಾಡಬಹುದಾಗಿದೆ.
9 ಆ್ಯಪ್ ಗಳು ಯಾವವು?
ಪ್ರಯಾಣಿಕರು ಈಗಿನಿಂದ ಈಸ್ ಮೈ ಟ್ರಿಪ್ (EaseMyTrip), ಹೈವೇ ಡಿಲೈಟ್ (Highway Delite), ಮೈಲ್ಸ್ ಆ್ಯಂಡ್ ಕಿಲೋಮೀಟರ್ಸ್ (Miles & Kilometres via Telegram), ನಮ್ಮ ಯಾತ್ರಿ (Namma Yatri), ಒನ್ ಟಿಕೆಟ್ (OneTicket), ರಾಪಿಡೋ (Rapido), ರೆಡ್ಬಸ್ (Redbus), ಟಮ್ಮಾಕ್ (Tummoc) ಮತ್ತು ಯಾತ್ರಿ – ಸಿಟಿ ಟ್ರಾವೆಲ್ ಗೈಡ್ (Yatri – City Travel Guide) ಎನ್ನುವ ಒಂಬತ್ತು ಜನಪ್ರಿಯ ಅಪ್ಲಿಕೇಶನ್ಗಳ ಮೂಲಕ ಬಿಎಂಆರ್ಸಿಎಲ್ ಕ್ಯೂಆರ್ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.
ನಮ್ಮ ಮೆಟ್ರೋ ಮೊಬೈಲ್ ಆ್ಯಪ್, ಬಿಎಂಆರ್ ಸಿ ಎಲ್ ವಾಟ್ಸ್ ಆ್ಯಪ್ ಚಾಟ್ ಬಾಟ್ (8105556677), ಮತ್ತು ಪೇಟಿಎಂ (Paytm) ಆ್ಯಪ್ ಗೆ ಪೂರಕವಾಗಿ ಹೊಸ 9 ಆ್ಯಪ್ ಗಳು ಸೇರುತ್ತಿದ್ದು, ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲಿದೆ.
ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್, ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಈಗಾಗಲೇ 2023ರಿಂದ ಓ ಎನ್ ಡಿಸಿ ನೆಟ್ ವರ್ಕ್ ನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೋ ಟಿಕೆಟ್ಗಳ ಸೇರ್ಪಡೆ ಬಹುಮಾದ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್ ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದ್ದು, ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.