ಬೆಂಗಳೂರು: ಗೃಹ ಸಾಲ, ವಾಹನ ಸಾಲ ಸೇರಿ ಹಲವು ಬಗೆಯ ವೈಯಕ್ತಿಕ ಸಾಲ ಮಾಡಿದವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಎಸ್ ಬಿಐ ಬಡ್ಡಿದರಲ್ಲಿ (SBI Interest Rate) 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದ್ದು, ಏಪ್ರಿಲ್ 15ರಿಂದಲೇ ಪರಿಷ್ಕೃತ ಬಡ್ಡಿದರ ಅನ್ವಯವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ದಿನಗಳ ಹಿಂದಷ್ಟೇ ರೆಪೋ ದರವನ್ನು ಇಳಿಕೆ ಮಾಡಿದ ಕಾರಣ ಎಸ್ ಬಿಐ ಬಡ್ಡಿದರವನ್ನು ಇಳಿಕೆ ಮಾಡಿದೆ.
ಈಗಿರುವ ಶೇ.8.90 ರಷ್ಟಿರುವ ಬ್ಯಾಂಕಿನ ಇಬಿಎಲ್ಆರ್ (ಬಾಹ್ಯ ಬೆಂಚ್ ಮಾರ್ಕ್ ಆಧಾರಿತ ಸಾಲ ದರ) ಅನ್ನು ಶೇ.8.65 ಕ್ಕೆ ಇಳಿಸಲಾಗಿದೆ. ಬ್ಯಾಂಕ್ ತನ್ನ ಆರ್ ಎಲ್ ಎಲ್ ಆರ್ (ರೆಪೋ ಲಿಂಕ್ಡ್ ಲೆಂಡಿಂಗ್ ದರ) ವನ್ನು ಕೂಡ ಪರಿಷ್ಕರಣೆ ಮಾಡಿದ್ದು, ಇದು ಶೇ. 8.50 ರಿಂದ ಶೇ.8.25ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ವೈಯಕ್ತಿಕ ಸಾಲ ಮಾಡಿದವರ ಮಾಸಿಕ ಇಎಂಐ ಭಾರ ಕಡಿಮೆಯಾಗಲಿದೆ.
ಆರ್ ಬಿಐ ಬಡ್ಡಿದರವನ್ನು ಇಳಿಕೆ ಮಾಡಿದ ಕಾರಣ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿದರದಲ್ಲಿ 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದ್ದವು.
ವೈಯಕ್ತಿಕ ಸಾಲದ ಇಎಂಐಗೂ ರೆಪೋದರಕ್ಕೂ ನೇರ ಸಂಬಂಧವಿದೆ. ರೆಪೋ ದರ ಹೆಚ್ಚಾದರೆ ಅಥವಾ ಕಡಿಮೆಯಾದರೆ ಗೃಹಸಾಲ ಸೇರಿ ಇತರೆ ಸಾಲಗಳ ಮೇಲಿನ ಫ್ಲೋಟಿಂಗ್ ಬಡ್ಡಿದರಗಳಲ್ಲಿ ವ್ಯತ್ಯಾಸವಾಗುತ್ತದೆ. ಇಬಿಎಲ್ಆರ್ ರೆಪೋ ದರಕ್ಕೆ ಸಂಬಂಧಿಸಿದೆ. ಹೀಗಾಗಿ ರೆಪೋ ದರಗಳಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ, ಸಾಲಗಾರರ ಇಎಂಐ ಪಾವತಿಯಲ್ಲಿ ಕೂಡ ಬದಲಾವಣೆ ಆಗುವುದಿಲ್ಲ. ಆದರೆ, ರೆಪೋ ದರಗಳಲ್ಲಿನ ಕಡಿತ ಅಥವಾ ಹೆಚ್ಚಳವು ಆರ್ಬಿಐ ರೆಪೋ ದರಕ್ಕೆ ಲಿಂಕ್ ಮಾಡಲಾದ ಸಾಲಗಳ ಬಡ್ಡಿದರದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ.