ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮೂಲಕ ಮೊದಲೆಲ್ಲ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡುವುದು ತುಂಬ ಕಷ್ಟವಾಗುತ್ತಿತ್ತು. ಕಚೇರಿಗೆ ಅಲೆದಾಡಬೇಕಿತ್ತು. ಇದಾದ ನಂತರ ಆನ್ ಲೈನ್ ನಲ್ಲೇ ಪಿಎಫ್ ಮೊತ್ತವನ್ನು ವಿತ್ ಡ್ರಾ (EPF Withdrawal) ಮಾಡುವ ಪದ್ಧತಿ ಜಾರಿಗೆ ಬಂದ ಬಳಿಕ ಉದ್ಯೋಗಿಗಳಿಗೆ, ನಿವೃತ್ತರಿಗೆ ಭಾರಿ ಅನುಕೂಲವಾಯಿತು. ಈಗ ಕೇಂದ್ರ ಸರ್ಕಾರವು ಮತ್ತೊಂದು ಹೆಜ್ಜೆ ಮುಂದೆ ಇರಿಸಿದೆ. ಕೇವಲ ಮೂರು ತಿಂಗಳಲ್ಲಿ ಇಪಿಎಫ್ ಮೊತ್ತವನ್ನು ಯುಪಿಐ ಮೂಲಕ ವಿತ್ ಡ್ರಾ ಮಾಡುವ ವ್ಯವಸ್ಥೆ ಜಾರಿಗೆ ಕೇಂದ್ರವು ಚಿಂತನೆ ನಡೆಸಿದೆ.
ದೇಶದಲ್ಲೀಗ ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್ ಇವೆ. ಬಹುತೇಕ ಜನ ಯುಪಿಐ ಮೂಲಕ ಪಾವತಿ ಮಾಡುತ್ತಾರೆ. ಹಾಗಾಗಿ, ಇಪಿಎಫ್ಒ ಸದಸ್ಯರಿಗೆ ಯುಪಿಐ ಮೂಲಕ ಹಣವನ್ನು ಡ್ರಾ ಮಾಡುವ ಸೌಕರ್ಯ ನೀಡಲು ಇಪಿಎಫ್ಒ ಸಂಸ್ಥೆಯು ಮುಂದಾಗಿದೆ. ಇದಕ್ಕಾಗಿ ನೀಲನಕ್ಷೆಯನ್ನು ತಯಾರಿಸಿರುವ ಇಪಿಎಫ್ಒ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್ ಸಿಪಿಸಿ) ಜತೆ ಮಾತುಕತೆ ನಡೆಸಿದೆ ಎಂದು ತಿಳಿದುಬಂದಿದೆ.
ಎನ್ ಸಿಪಿಸಿ ಜತೆಗಿನ ಮಾತುಕತೆ ಯಶಸ್ವಿಯಾಗಿ, ನೂತನ ವ್ಯವಸ್ಥೆಗೆ ಅನುಮತಿ ದೊರೆತರೆ ಕೇವಲ ಮೂರು ತಿಂಗಳಲ್ಲಿ ಯುಪಿಐ ಮೂಲಕ ಪಿಎಫ್ ಖಾತೆಯ ಹಣವನ್ನು ಉಳಿತಾಯ ಖಾತೆಗೆ ಜಮೆ ಮಾಡಿಕೊಳ್ಳಬಹುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನೂತನ ವಿತ್ ಡ್ರಾ ವ್ಯವಸ್ಥೆ ಜಾರಿಗೆ ಬಂದರೆ ಸುಮಾರು 7.4 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿವೆ.
ಕೇಂದ್ರ ಕಾರ್ಮಿಕ ಸಚಿವಾಲಯವು ಕಳೆದ ಕೆಲ ತಿಂಗಳಿಂದ ಇಪಿಎಫ್ಒ ಮೊತ್ತವನ್ನು ವಿತ್ ಡ್ರಾ ಮಾಡುವುದು, ಸುಲಭವಾಗಿ ಅರ್ಜಿ ಸಲ್ಲಿಸುವುದು ಸೇರಿ ಹಲವು ಪ್ರಕ್ರಿಯೆಗಳನ್ನು ಸರಳಗೊಳಿಸುತ್ತಿದೆ. ಅಲ್ಲದೆ, ಏಕೀಕೃತ ವ್ಯವಸ್ಥೆಯನ್ನು ಜೂನ್ 1ರಿಂದ ಜಾರಿಗೆ ತರಲಾಗುತ್ತದೆ. ಇದರಿಂದಾಗಿ ಇಪಿಎಫ್ಒ ಅರ್ಜಿ ಸಲ್ಲಿಕೆ, ಕ್ಲೇಮ್ ಸೆಟಲ್ ಮೆಂಟ್ ಸೇರಿ ಹಲವು ಸುಧಾರಣೆಗಳು ಜಾರಿಗೆ ಬರಲಿವೆ. ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವ ವವಸ್ಥೆ ಜಾರಿಗೊಳಿಸುವುದೂ ಕೇಂದ್ರ ಸರ್ಕಾರದ ಉದ್ದೇಶವಾಗಿದೆ.