ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಆಪ್ತ ಹಾಗೂ ಪ್ರಕರಣದ ಎರಡನೇ ಆರೋಪಿಯ ಜಾಮೀನು ಅರ್ಜಿ ವಜಾಗೊಂಡಿದೆ.
ಎರಡನೇ ಆರೋಪಿ ತರುಣ್ ರಾಜು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಬೆಂಗಳೂರು ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಜಾಮೀನು ಕೋರಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ವಿಶ್ವನಾಥ ಸಿ. ಗೌಡರ್, ಈ ಕುರಿತು ತೀರ್ಪು ಪ್ರಕಟಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಆರೋಪಿ ಪರ ವಕೀಲರು, ತರುಣ್‌ರಾಜ್ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಪೊಲೀಸರ ಬಳಿ ಸಾಕ್ಷ್ಯಗಳೇ ಇಲ್ಲ. ವಿದೇಶಕ್ಕೆ ತೆರಳಲು ರನ್ಯಾಗೆ ವಿಮಾನ ಟಿಕೆಟ್ ಕೊಡಿಸಿರುವುದೇ ತರುಣ್ ಎಂಬ ಡಿಆರ್‌ಐ ಆರೋಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ತರುಣ್ ಬಂಧಿಸಿರುವ ಡಿಆರ್‌ಐ ಅಧಿಕಾರಿಗಳು ಪೊಲೀಸರೇ ಅಲ್ಲ. ಬಂಧನಕ್ಕೆ ಡಿಆರ್‌ಐ ಅಧಿಕಾರಿಗಳು ಸೂಕ್ತ ಕಾರಣ ನೀಡಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ವಾದಿಸಿದ್ದಾರೆ.
ಆಕ್ಷೇಪಿಸಿದ್ದ ಡಿಆರ್‌ಐ ಪರ ವಕೀಲರು, ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಮೊದಲ ಆರೋಪಿ ರನ್ಯಾ ರಾವ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ತರುಣ್ ಪಾತ್ರ ಸಾಬೀತಾಗಿದೆ. ಮಾ.3 ರಂದು ತರುಣ್ ದುಬೈನಿಂದ ಹೈದರಾಬಾದ್‌ಗೆ ಪ್ರಯಾಣ ಮಾಡಿದ್ದಾರೆ. ತರುಣ್ ರಾಜ್ ರನ್ಯಾಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ ಹಾಗೂ ತರುಣ್ ವಿಸಾ ಖಾತೆಗೆ ರನ್ಯಾ ಹಣ ಹಾಕಿದ್ದಾರೆ ಎಂದು ವಾದಿಸಿದ್ದಾರೆ. ತರುಣ್ ಅಮೆರಿಕ ನಾಗರಿಕನಾಗಿದ್ದು, ಜಾಮೀನು ನೀಡಿದರೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇರುವುದರಿಂದಾಗಿ ಜಾಮೀನು ನೀಡಬಾರದು ಎಂದು ವಾದಿಸಿದ್ದಾರೆ.