ಬೆಂಗಳೂರು: ಕಳೆದ ಒಂದು ವಾರದಿಂದ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು ಬುಧವಾರ (ಮಾರ್ಚ್ 25) ಭಾರಿ ಏರಿಕೆ ಕಂಡಿದೆ. 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 376 ರೂಪಾಯಿ ಏರಿಕೆಯಾದರೆ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 376 ರೂಪಾಯಿ ಏರಿಕೆಯಾಗಿದೆ. ಇದರಿಂದಾಗಿ, ಬುಧವಾರ ಚಿನ್ನ ಖರೀದಿಸಲು ಬಯಸುವವರಿಗೆ ಕಹಿ ಸುದ್ದಿ ಸಿಕ್ಕಂತಾಗಿದೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 14,667 ರೂಪಾಯಿ ಇದೆ. ಇನ್ನು 10 ಗ್ರಾಂಗೆ 1,46,670 ರೂಪಾಯಿ ಆಗಿದೆ. ಇದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 13,445 ರೂಪಾಯಿ ಆಗಿದೆ. 10 ಗ್ರಾಂಗೆ 1,34,450 ರೂಪಾಯಿ ಇದೆ.
ಅಮೆರಿಕ-ಇರಾನ್ ಸಂಘರ್ಷದಿಂದ ಇದುವರೆಗೆ ಶೇ.18ರಷ್ಟು ಚಿನ್ನದ ಬೆಲೆ ಕುಸಿದಿದೆ. ಯುದ್ಧ ಆರಂಭವಾದ ದಿನವಾದ ಫೆಬ್ರವರಿ 28ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಭಾರಿ ಏರಿಕೆ ಕಂಡಿತ್ತು. ಅಂದು 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 16,871 ರೂಪಾಯಿ ಇದ್ದರೆ, 22 ಕ್ಯಾರೆಟ್ ಬೆಲೆಯು 15,465 ರೂಪಾಯಿಗೆ ತಲುಪಿತ್ತು. ಸಾಮಾನ್ಯವಾಗಿ, ಯುದ್ಧದಂತಹ ಪರಿಸ್ಥಿತಿಯಲ್ಲಿ ಚಿನ್ನ, ಬೆಳ್ಳಿಯ ಬೆಲೆಯು ಏರಿಕೆಯಾಗುತ್ತದೆ. ಆದರೆ, ಅಮೆರಿಕ-ಇರಾನ್ ಸಂಘರ್ಷ ಆರಂಭವಾದಾಗಿನಿಂದಲೂ ಬೆಲೆ ಇಳಿಕೆಯಾಗುತ್ತಿದೆ.
ಬೆಳ್ಳಿಯ ಬೆಲೆಯಲ್ಲೂ ಭರ್ಜರಿ ಏರಿಕೆ
ಬೆಳ್ಳಿಯ ಬೆಲೆ ಕೂಡ ಕಳೆದ ವಾರದಿಂದ ಇಳಿಕೆಯಾಗುತ್ತಲೇ ಇತ್ತು. ಆದರೆ, ಬುಧವಾರ ಬೆಳ್ಳಿಯ ಬೆಲೆಯಲ್ಲೂ ಭರ್ಜರಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ 15 ಸಾವಿರ ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ ಒಂದು ಕೆ.ಜಿ ಬೆಳ್ಳಿಯ ಬೆಲೆ ಈಗ 2.5 ಲಕ್ಷ ರೂಪಾಯಿಗೆ ಏರಿಕೆಯಾದಂತಾಗಿದೆ.



















