ಬೆಂಗಳೂರು: ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಗಗನಕ್ಕೇರಿದೆ. ಇಷ್ಟಾದರೂ ಜನ, ಹಬ್ಬ, ಧನತ್ರಯೋದಶಿ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಿದ್ದಾರೆ. ಚಿನ್ನ ಹಾಗೂ ಬೆಳ್ಳಿಯ ಖರೀದಿಯು ದಾಖಲೆ ಮಟ್ಟದಲ್ಲಿ ಆಗುತ್ತಿದೆ. ಆದರೆ, ನೀವು ಖರೀದಿಸಿದ ಚಿನ್ನ ಅಥವಾ ಬೆಳ್ಳಿಯ ಆಭರಣವು ನಕಲಿಯೋ, ಅಸಲಿಯೋ ಎಂಬುದನ್ನು ಈಗ ಒಂದೇ ಆ್ಯಪ್ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಚಿನ್ನದ ಶುದ್ಧತೆಯನ್ನೂ ಇದರ ಮೂಲಕ ಪರಿಶೀಲಿಸಿಬಹುದಾಗಿದೆ.
ಹೌದು, ‘ಬಿಐಎಸ್ ಕೇರ್’ ಎಂಬ ಅಪ್ಲಿಕೇಶನ್ ಮೂಲಕ ಚಿನ್ನ ಹಾಗೂ ಬೆಳ್ಳಿಯ ಪರಿಶುದ್ಧತೆಯನ್ನು ಪರಿಶೀಲಿಸಬಹುದಾಗಿದೆ. ಇದು ಸರ್ಕಾರದ ಆ್ಯಪ್ ಆಗಿದ್ದು, ಯಾರು ಬೇಕಾದರೂ ಚೆಕ್ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಂದು ಹಾಲ್ಮಾರ್ಕ್ ಮಾಡಿದ ಚಿನ್ನದ ಆಭರಣವನ್ನು ವಿಶಿಷ್ಟ HUID (ಹಾಲ್ ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ) ನೊಂದಿಗೆ ಗುರುತಿಸಲಾಗಿದೆ. ಇದು ಅಕ್ಷರಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ 6 – ಅಂಕಿಯ ಆಲ್ಫಾ ನ್ಯೂಮರಿಕ್ ಕೋಡ್ ಆಗಿದೆ. ಈ ಕೋಡ್ ವಿಶಿಷ್ಟವಾಗಿದ್ದು, ಗುರುತಿಸುವುದು ಸುಲಭವಾಗಿದೆ. ಹಾಗಾಗಿ, ಆ್ಯಪ್ ನಲ್ಲಿ ಒದಗಿಸಲಾದ ಮಾಹಿತಿಯು ನೀವು ಖರೀದಿಸಿದ ಆಭರಣಗಳಿಗೆ ಹೊಂದಿಕೆಯಾಗದಿದ್ದರೆ, ಅದು ನಕಲಿ ಎಂಧು ಪರಿಗಣಿಸಬಹುದು.

ಗ್ರಾಹಕರು ಖರೀದಿಸಿದ ಬಳಿಕ ಮಾತ್ರವಲ್ಲದೆ, ಖರೀದಿಗೂ ಮೊದಲು ಕೂಡ ಬಿಐಎಸ್ ಕೇರ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಬೇಕು. ಈ ವಿಧಾನವು ನಕಲಿ ಆಭರಣಗಳನ್ನು ಖರೀದಿಸುವುದರಿಂದ ನಿಮ್ಮನ್ನು ಬಚಾವ್ ಮಾಡಬಹುದು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)ನ ಗಾಜಿಯಾಬಾದ್ ಶಾಖೆ ಮುಖ್ಯಸ್ಥ ಎ.ಆರ್. ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ.
ಅಸಲಿಯತ್ತು ಪರೀಕ್ಷೆ ಮಾಡುವುದು ಹೇಗೆ?
- ನಿಮ್ಮ ಮೊಬೈಲ್ ನಲ್ಲಿ BIS ಕೇರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಬೇಕು.
- ಅಪ್ಲಿಕೇಶನ್ ತೆರೆದ ನಂತರ, ‘HUID ಪರಿಶೀಲಿಸಿ’ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
- ನೀವು ಖರೀದಿಸಿದ ಚಿನ್ನ ಅಥವಾ ಬೆಳ್ಳಿ ಆಭರಣಗಳ ಮೇಲೆ ಮುದ್ರಿಸಲಾದ 6 ಅಂಕಿಯ HUID ಸಂಖ್ಯೆಯನ್ನು ನಮೂದಿಸಬೇಕು.
- ಇದಾದ ಬಳಿಕ ಯಾವ ಹಾಲ್ ಮಾರ್ಕಿಂಗ್ ಕೇಂದ್ರವು ಆಭರಣಗಳನ್ನು ಪ್ರಮಾಣೀಕರಿಸಿದೆ? ನಿಮ್ಮ ಆಭರಣ ಎಷ್ಟು ಶುದ್ಧ ಎಂಬುದರ ಮಾಹಿತಿ ನೀಡಲಾಗುತ್ತದೆ.