ಬೆಂಗಳೂರು : ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕೋಟಿ ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕೆಯ ಲಗೇಜ್ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ವಜ್ರಾಭರಣಗಳು ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ.

ಹುಬ್ಬಳ್ಳಿ ಮೂಲದ ಮಹಿಳೆ ಕಳೆದ ನವೆಂಬರ್ ತಿಂಗಳಲ್ಲಿ ಕೆಐಎಬಿಯಿಂದ ದುಬೈ ಮೂಲಕ ಅಮೇರಿಕಾಗೆ ಪ್ರಯಾಣಿಸುತ್ತಿದ್ದ ವೇಳೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಅಮೇರಿಕಾದಲ್ಲಿ ಮಗನೊಂದಿಗೆ ವಾಸವಾಗಿದ್ದ ಅವರು ಇತ್ತೀಚೆಗೆ ರಾಜ್ಯಕ್ಕೆ ವಾಪಸ್ ಬಂದ ಹಿನ್ನೆಲೆ, ಕಳ್ಳತನದ ಕುರಿತು ಇದೀಗ ದೂರು ದಾಖಲಿಸಿದ್ದಾರೆ.

ಮಹಿಳೆ ಚೆಕ್-ಇನ್ ಸಮಯದಲ್ಲಿ ತಮ್ಮ ಲಗೇಜ್ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಅಧಿಕಾರಿಗಳಿಗೆ ತೋರಿಸಿ, ಬ್ಯಾಗ್‌ಗೆ ಟ್ಯಾಗ್ ಮಾಡಿಸಿಕೊಂಡಿದ್ದರು. ಬಳಿಕ ಬ್ಯಾಗ್ ಅನ್ನು ವಿಮಾನದ ಲಗೇಜ್ ವಿಭಾಗಕ್ಕೆ ನೀಡಲಾಗಿತ್ತು. ಆದರೆ ದುಬೈ ತಲುಪುವಷ್ಟರಲ್ಲಿ ಲಗೇಜ್ ಬ್ಯಾಗ್‌ನಲ್ಲಿದ್ದ ಚಿನ್ನ ಮತ್ತು ವಜ್ರಾಭರಣಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಕಳ್ಳತನವಾಗಿರುವ ಚಿನ್ನಾಭರಣಗಳ ತೂಕ ಸುಮಾರು 790 ಗ್ರಾಂ ಆಗಿದ್ದು, ಜೊತೆಗೆ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳೂ ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ವಿಮಾನ ನಿಲ್ದಾಣದ ಸಿಬ್ಬಂದಿ ಲಗೇಜ್ ಹ್ಯಾಂಡ್ಲಿಂಗ್ ಸಮಯದಲ್ಲಿ ಕಳ್ಳತನ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಏರ್ಪೋಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಏರ್ ಕ್ವಾಲಿಟಿ ದಿಢೀರ್ ಸುಧಾರಣೆ ; ಮಂಗಳೂರು, ಬಳ್ಳಾರಿ, ಶಿವಮೊಗ್ಗದಲ್ಲಿ ಆತಂಕ



















