ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆದ್ದು ಬೀಗಿದ್ದಾರೆ. ಆದರೆ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತ (Bangaru Hanumanta) ಅವರು ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ (Congress) ಕಾರ್ಯಕರ್ತರನ್ನು ತೊಡೆ ತಟ್ಟಿದ ಘಟನೆ ನಡೆದಿದೆ.
ಸೋಲು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರಬರುವಾಗ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಹನುಮಂತ ಅವರು `ಕೈ’ ಕಾರ್ಯಕರ್ತರನ್ನು ಕಂಡು ತೊಡೆ ತಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇದು ಧರ್ಮ, ಅಧರ್ಮದ ಮಧ್ಯೆ ನಡೆದ ಚುನಾವಣೆ. ಧರ್ಮ ಸೋತಿದೆ, ಅಧರ್ಮ ಗೆದ್ದಿದೆ. ಸೋಲು ಹಾಗೂ ಗೆಲವು ಸಹಜ. ಪುಡಾರಿಗಳು ಬಂದು ಕೂಗಾಡಿದರು. ಅದಕ್ಕೆ ತೊಡೆ ತಟ್ಟಿದ್ದೇನೆ. 2028ಕ್ಕೆ ಸಂಡೂರಿನಿಂದಲೇ ಸ್ಪರ್ಧಿಸಿ ನಾನು ಶಾಸಕನಾಗುತ್ತೇನೆ ಎಂದಿದ್ದಾರೆ.