‘ಕಾಂತಾರ: ಚಾಪ್ಟರ್ 1’ ಸಿನಿಮಾದಿಂದ ದೈವಕ್ಕೆ ಅಪಚಾರ ಆಗಿದೆ ಎಂಬ ಮಾತಿತ್ತು. ಈ ಬಗ್ಗೆ ನಟ ರಿಷಬ್ ಶೆಟ್ಟಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ದೈವವನ್ನು ನಂಬುತ್ತೇನೆ. ಎಲ್ಲಿಯೂ ತಪ್ಪು ಆಗದಂತೆ ಸಿನಿಮಾ ಮಾಡಿದ್ದೇವೆ. ಹಿರಿಯ ಮಾರ್ಗದರ್ಶನದಲ್ಲೇ ಸಿನಿಮಾ ಸಿದ್ಧವಾಗಿದೆ. ಹೇಳುವವರು ಹೇಳುತ್ತಾರೆ. ಅದು ಅವರ ದೃಷ್ಟಿಕೋನ. ನಾವು ಅಂದುಕೊಡಂತೆ ಸಿನಿಮಾ ತಂದಿದ್ದೇವೆ’ ಎಂದು ರಿಷಬ್ ಖಡಕ್ ಆಗಿ ಉತ್ತರಿಸಿದ್ದಾರೆ.
ಕಾಂತಾರ ಚಾಪ್ಟರ್-1 ಸಕ್ಸಸ್ ಬೆನ್ನಲ್ಲೇ ಇಂದು ನಟ ರಿಷಬ್ ಶೆಟ್ಟಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ತಾಯಿ ಚಾಮುಂಡಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದೇ ಸಿನಿಮಾ ಮಾಡಿದ್ದೇನೆ. ನಾಡಿನ ಜನತೆಯಿಂದ ಅದ್ಭುತ ಯಶಸ್ಸು ಸಿಕ್ಕಿದೆ ಎಂದರಲ್ಲದೇ ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ನಾನು ಸಿನಿಮಾ ಡೈರೆಕ್ಟರ್ ಅಷ್ಟೇ. ಲೆಕ್ಕದ ವಿಚಾರದಲ್ಲಿ ನಾನಿಲ್ಲ. ವಿಜಯ ಕಿರಗಂದೂರು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ದೈವರಾದಕರು ಸಿನಿಮಾ ಬಗ್ಗೆ ವಿರೋಧ ಎತ್ತಿರುವ ಕುರಿತ ಪ್ರಶ್ನೆಗೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದೇನೆ. ದೈವ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ನಾನು ದೈವವನ್ನ ನಂಬುತ್ತೇನೆ ಆರಾಧನೆ ಮಾಡುತ್ತೇನೆ.
ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ, ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.