ಜೂ. ಎನ್ ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ದೇವರ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಧ್ಯರಾತ್ರಿಯಿಂದಲೇ ಚಿತ್ರ ಬಿಡುಗಡೆಯಾಗಿದೆ. ಅಲ್ಲದೇ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ. ಕೆಲವು ಚಿತ್ರಮಂದಿರಗಳಲ್ಲಿ ನಿರೀಕ್ಷೆಯಂತೆಯೇ ಅಭಿಮಾನಿಗಳ ಅಬ್ಬರದಿಂದ ಗಲಾಟೆಗಳು ಕೂಡ ನಡೆದಿವೆ. ಹೀಗಾಗಿ ಕೆಲವೆಡೆ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಆಂಧ್ರ-ತೆಲಂಗಾಣಗಳಲ್ಲಿ ಇಂತಹ ಘಟನೆಗಳು ವರದಿಯಾಗಿವೆ.
ಕಡಪ ಜಿಲ್ಲೆಯಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದಾಗಿ ದೇವರ ಸಿನಿಮಾದ ಟಿಕೆಟ್ ಗೆ ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರದ ಸಿಬ್ಬಂದಿ ಹಾಗೂ ಅಭಿಮಾನಿಗಳ ನಡುವೆ ಜಗಳ ನಡೆದಿವೆ. ಆಗ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಬೀಸಿದ್ದಾರೆ.
ಹಲವೆಡೆ ಟಿಕೆಟ್ ಸಿಗದ ಅಭಿಮಾನಿಗಳು ಚಿತ್ರ ಮಂದಿರದೊಳಗೆ ನುಗ್ಗಿದ್ದಾರೆ. ಇದರಿಂದಾಗಿ ಕೋಲಾಹಲವೇ ನಡೆದಿವೆ. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದ್ದಾರೆ.
ಇತ್ತೀಚೆಗೆ ಜೂ ಎನ್ಟಿಆರ್ ಒಬ್ಬರೇ ನಾಯಕ ನಟನಾಗಿ ನಟಿಸಿರುವ ಚಿತ್ರ ಬಿಡುಗಡೆಯಾಗಿರಲಿಲ್ಲ. ಸುಮಾರು ಐದಾರು ವರ್ಷಗಳ ನಂತರ ಈ ರೀತಿಯ ಚಿತ್ರ ಬಿಡುಗಡೆಯಾಗಿದೆ.
ಹೀಗಾಗಿ ಅಭಿಮಾನಿಗಳು ಖುಷಿಯಿಂದ ಚಿತ್ರ ವೀಕ್ಷಿಸುತ್ತಿದ್ದಾರೆ. ಚಿತ್ರ ನೋಡಿದ ಕೆಲ ಅಭಿಮಾನಿಗಳು ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿಲ್ಲ ಎನ್ನುತ್ತಿದ್ದಾರೆ. ಆದರೆ, ಚಿತ್ರ ಯಾವ ರೀತಿಯ ಯಶಸ್ಸು ಕಾಣಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.