ದೇಶದ ಜನನ ಪ್ರಮಾಣ (Birth Rate)ಹೆಚ್ಚಿಸಲು ರಷ್ಯಾದಿಂದ ಈ ಘೋಷಣೆ
ಚೀನಾ, (china)ಜಪಾನ್ (japan) ಬಳಿಕ ರಷ್ಯಾದಿಂದಲೂ ಜನನ ಪ್ರಮಾಣ ಏರಿಕೆಗೆ ಹರಸಾಹಸ
ಮಾಸ್ಕೋ: “ಆರೋಗ್ಯವಂತ ಮಗುವಿಗೆ ಜನ್ಮ ನೀಡಿ, 81,000 ರೂ. ಬಹುಮಾನ ಗೆಲ್ಲಿ!”
ಇದು 25ರೊಳಗಿನ ವಿದ್ಯಾರ್ಥಿನಿಯರಿಗೆ ರಷ್ಯಾದ ಪ್ರಾಂತ್ಯವೊಂದರ ಆಡಳಿತ ನೀಡಿರುವ ಆಫರ್(Offer). ಜನನ ಪ್ರಮಾಣವು ತೀವ್ರ ಕುಸಿತ(Decrease) ಕಾಣುತ್ತಿರುವ ಹಿನ್ನೆಲೆಯಲ್ಲಿ ಕರೇಲಿಯಾ (Karelia) ಪ್ರಾಂತ್ಯದ ಆಡಳಿತವು ಇಂಥದ್ದೊಂದು ‘ಸಾಹಸ’ಕ್ಕೆ ಕೈಹಾಕಿದೆ. ಈ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸಲು ಹರಸಾಹಸ ಪಡುತ್ತಿರುವ ಚೀನಾ ಮತ್ತು ಜಪಾನ್ ಸಾಲಿಗೆ ಈಗ ರಷ್ಯಾ ಕೂಡ ಸೇರ್ಪಡೆಯಾದಂತಾಗಿದೆ.
ಜನಸಂಖ್ಯೆ ಹೆಚ್ಚಳದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಆಫರ್ ಸ್ವೀಕರಿಸುವವರಿಗೆ ಹಲವು ಷರತ್ತುಗಳನ್ನೂ ವಿಧಿಸಲಾಗಿದೆ.
ಷರತ್ತುಗಳೇನು?
ಈ ಬಹುಮಾನ(Gift) ಪಡೆಯಬೇಕೆಂದರೆ, ಅರ್ಜಿದಾರರು ಸ್ಥಳೀಯ ವಿಶ್ವವಿದ್ಯಾನಿಲಯದ ಅಥವಾ ಕಾಲೇಜುಗಳ ವಿದ್ಯಾರ್ಥಿನಿಯರಾಗಿರಬೇಕು, 25 ವರ್ಷದೊಳಗಿನವರಾಗಿರಬೇಕು ಹಾಗೂ ಕರೇಲಿಯಾ (Karelia) ಪ್ರಾಂತ್ಯದ ನಿವಾಸಿಗಳಾಗಿರಬೇಕು. ಅಷ್ಟೇ ಅಲ್ಲ, ಜನ್ಮ ನೀಡುವ ಮಗು ಆರೋಗ್ಯವಂತವಾಗಿರಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.
ಅವಧಿಗೆ ಮುನ್ನವೇ ಮಗು ಜನಿಸಿದರೆ ತಾಯಿಗೆ ಬೋನಸ್ ಸಿಗುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ಆದರೆ, ಹುಟ್ಟಿದ ಕೂಡಲೇ ಬೇರೆ ಬೇರೆ ಕಾರಣಗಳಿಂದ ಶಿಶು ಮೃತಪಟ್ಟರೆ ಅಥವಾ ವಿಕಲಾಂಗವಾಗಿ ಹುಟ್ಟಿದರೆ ಬಹುಮಾನದ ಮೊತ್ತ ಸಿಗುವುದೋ, ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿಲ್ಲ. ಅಲ್ಲದೇ, ಮಗುವಿನ ಆರೈಕೆ ಹಾಗೂ ಪ್ರಸವಾನಂತರದ ಚೇತರಿಕೆಗೆ ಹೆಚ್ಚುವರಿ ಮೊತ್ತ ಪಾವತಿಸಲಾಗುತ್ತದೋ ಎಂಬುದನ್ನೂ ತಿಳಿಸಿಲ್ಲ.
ರಷ್ಯಾದಲ್ಲಿ ಜನನ ಪ್ರಮಾಣವು (Birth Rate)ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ತೀವ್ರ ಇಳಿಕೆ ಕಂಡುಬಂದಿದೆ. 2024ರ ಮೊದಲಾರ್ಧದಲ್ಲಿ ದೇಶದಲ್ಲಿ ಕೇವಲ 5,99,600 ಶಿಶುಗಳಷ್ಟೇ ಜನಿಸಿವೆ. ಇದು 25 ವರ್ಷಗಳಲ್ಲೇ ಅತಿ ಕನಿಷ್ಠ ಜನನ ಪ್ರಮಾಣವಾಗಿದೆ. 2023ರ ಇದೇ ಅವಧಿಗೆ ಹೋಲಿಸಿದರೆ 2024ರ ಮೊದಲಾರ್ಧದಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆ 16,000 ಇಳಿಕೆಯಾಗಿದೆ. ಇದು ದೇಶದ ಭವಿಷ್ಯಕ್ಕೆ ಮಾರಕ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್(Kremlin spokesman Dmitry Peskov) ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದ ಇತರೆ ಪ್ರಾಂತ್ಯಗಳ ಆಡಳಿತವೂ ಜನನ ಪ್ರಮಾಣ ಹೆಚ್ಚಿಸಲು ಇದೇ ಮಾದರಿಯ ಕ್ರಮಗಳನ್ನು ಘೋಷಿಸಿವೆ. ಒಟ್ಟಾರೆಯಾಗಿ 11 ಪ್ರಾಂತ್ಯಗಳಲ್ಲಿ ಮಕ್ಕಳಿಗೆ ಜನ್ಮ ನೀಡುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ಘೋಷಿಸಲಾಗಿದೆ.