ನವದೆಹಲಿ : ಜಿಎಸ್‌ಟಿ ದರಗಳಲ್ಲಿನ ಕಡಿತವನ್ನು ಗೇಮ್ ಚೇಂಜರ್ ಹಾಗೂ ಸ್ವಾತಂತ್ರ್ಯ ಬಳಿಕದ ಅತಿದೊಡ್ಡ ಸುಧಾರಣೆ ಎಂದು ಕೇಂದ್ರದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಬಣ್ಣಿಸಿದ್ದಾರೆ.
ಮಾತ್ರವಲ್ಲದೇ, ಇದರ ಸಂಪೂರ್ಣ ಲಾಭವನ್ನು ಉದ್ಯಮ ಕ್ಷೇತ್ರ ಗ್ರಾಹಕರಿಗೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಜಿಎಸ್‌ಟಿ ಸುಧಾರಣೆಗಳು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತವೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ ಎಂದು ಸಚಿವರು ಹೇಳಿದ್ದಾರೆ.
ʼಮೇಡ್ ಇನ್ ಇಂಡಿಯಾʼವನ್ನು ದೊಡ್ಡ ರೀತಿಯಲ್ಲಿ ಉತ್ತೇಜಿಸುವಂತೆ ಅವರು ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಜಿಎಸ್‌ಟಿಯಲ್ಲಿನ ಕಡಿತವು ಪ್ರತಿಯೊಬ್ಬ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
‘ಕಳೆದ 11 ವರ್ಷಗಳಲ್ಲಿ ಹಲವು ಉಪಕ್ರಮಗಳಿಗೆ ಪೂರಕವಾಗಿ ನಿನ್ನೆ ಘೋಷಣೆಯಾಗಿರುವ ಜಿಎಸ್‌ಟಿಯ ಪರೋಕ್ಷ ತೆರಿಗೆಗಳಲ್ಲಿನ ಸುಧಾರಣೆ ಪರಿವರ್ತನಾಶೀಲ ಸ್ವರೂಪದ್ದಾಗಿದೆ. ಇದು ಔಷಧ ವಲಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ರೈತರಿಂದ ಹಿಡಿದು ನಮ್ಮ ಎಂಎಸ್‌ಎಂಇಗಳವರೆಗೆ ಹಲವು ವಲಯಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದ್ದಾರೆ.
‘ದೇಶದ ಪ್ರತಿಯೊಬ್ಬ ಪಾಲುದಾರರು, ಪ್ರತಿಯೊಬ್ಬ ಗ್ರಾಹಕರು ಇದರ ಪ್ರಯೋಜನ ಪಡೆಯಲಿದ್ದಾರೆ’ ಎಂದು ಗೋಯಲ್ ಹೇಳಿದ್ದಾರೆ.