ಕಲಬುರಗಿ: ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಇಬ್ಬರು ಬಾಲಕಿಯರು ನೀರು ಪಾಲಾಗಿರುವ ಘಟನೆ ನಡೆದಿದೆ.
ಅಫಜಲಪುರ ತಾಲೂಕಿನ ಬನ್ನಹಟ್ಟಿ ಗ್ರಾಮದ ಹತ್ತಿರ ಇರುವ ಭೀಮಾ ನದಿಯಲ್ಲಿ ಈ ಘಟನೆ ನಡೆದಿದೆ. ಭೂಮಿಕಾ ದೊಡ್ಮನಿ(8) ಹಾಗೂ ಶ್ರಾವಣಿ ನಾಟೀಕಾರ(11) ನೀರು ಪಾಲಾಗಿರುವ ಬಾಲಕಿಯರು. ಬಟ್ಟೆ ತೊಳೆಯಲು ಹೋದವರು, ಆನಂತರ ನದಿಯಲ್ಲಿ ಸ್ನಾನಕ್ಕೆ ಮುಂದಾಗಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ನದಿಯ ರಭಸಕ್ಕೆ ಮೊದಲು ಭೂಮಿಕಾ ಕೊಚ್ಚಿ ಹೋಗಿದ್ದಾಳೆ. ಅವಳನ್ನು ರಕ್ಷಿಸಲು ಹೋದ ಶ್ರಾವಣಿ ಕೂಡ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.