ತಿರುವನಂತಪುರಂ : ಜ್ವರದಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಆಸ್ಪತ್ರೆಗೆ ದಾಖಲಾಗಿ ಎರಡೇ ದಿನಗಳಲ್ಲಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
ಬಾಲಕಿ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಅರೋಗ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತ ಬಾಲಕಿಯನ್ನು ತಾಮರಶ್ಮೀರಿಯ ಅನಯಾ (9) ಎಂದು ಗುರುತಿಸಲಾಗಿದೆ.
ಜ್ವರ ಬಂದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ (ಬುಧವಾರ (ಆ.13) ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆಯ ಅರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಕಾರಣ, (ಗುರುವಾರ, ಆ.14) ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಇದಾದ ಬಳಿಕ ಬಾಲಕಿಯ ಸಾವಿಗೆ ಕಾರಣ ಏನಿರಬಹುದು ಎಂದು ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯದಲ್ಲಿ ಶುಕ್ರವಾರ ತಡರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಬಾಲಕಿಗೆ ಕಲುಷಿತ ನೀರಿನಲ್ಲಿ ವಾಸಿಸುವ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಅಮೀಬಾದಿಂದ ಸೋಂಕು ಬಂದಿದ್ದು ಇದು ಹೇಗೆ ಹರಡಿತು ಎಂಬ ಕುರಿತು ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದೆ.