ಮೈಸೂರು : ಅರಮನೆ ನಗರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲೇ ಹುಟ್ಟಿ ಬೆಳೆದ ‘ಯುವರಾಜ’ ಹೆಸರಿನ ಜಿರಾಫೆಯ 25ನೇ ವರ್ಷದ ಹುಟ್ಟುಹಬ್ಬವನ್ನು ಗುರುವಾರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ಯುವರಾಜನಿಗೆ ಇಷ್ಟವಾದ ಹುಲ್ಲು, ವಿವಿಧ ಕಾಳು ಹಾಗೂ ಹಣ್ಣುಗಳಿಂದ ಸಿಬ್ಬಂದಿ ವಿಶೇಷ ಕೇಕ್ ತಯಾರಿಸಿದ್ದು, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಅನುಷಾ ಹಾಗೂ ಸಿಬ್ಬಂದಿ ಯುವರಾಜ ಜಿರಾಫೆಗೆ ಜನ್ಮದಿನದ ಶುಭಾಶಯ ಕೋರಿ ತಯಾರಿಸಿದ್ದ ವಿಶೇಷ ಕೇಕ್ ತಿನ್ನಿಸಿದ್ದಾರೆ.
ಚಾಮರಾಜೇಂದ್ರ ಮೃಗಾಲಯದಲ್ಲಿ ಒಟ್ಟು 10 ಜಿರಾಫೆಗಳಿವೆ. ಮೃಗಾಲಯದಲ್ಲೇ ಹುಟ್ಟಿ ಬೆಳೆದ ಯುವರಾಜ ಜಿರಾಫೆಯೇ ಹಿರಿಯ ಸದಸ್ಯ. ಕಾಡಿನಲ್ಲಿರುವ ಜಿರಾಫೆಗಳು ಸಾಮಾನ್ಯವಾಗಿ 10ರಿಂದ 15 ವರ್ಷ ಬದುಕುತ್ತವೆ. ಆದರೆ, ಮೃಗಾಲಯದ ಸಿಬ್ಬಂದಿಯ ಆರೈಕೆ, ಪಾಲನೆಯಿಂದಾಗಿ ಯುವರಾಜ 25 ವರ್ಷ ಪೂರೈಸಿದ್ದಾನೆ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಮೃಗಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ ಎಂದು ಮೃಗಾಲಯ ತಿಳಿಸಿದೆ. ಯುವರಾಜ ಜಿರಾಫೆಯ ಹುಟ್ಟುಹಬ್ಬ ಆಚರಣೆಯ ವಿಡಿಯೋವನ್ನು ಮೈಸೂರು ಝೂ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತಾವಗಿದೆ.
ಇದನ್ನೂ ಓದಿ : ಖ್ಯಾತ ನಟಿಯ ಕಿಡ್ನ್ಯಾಪ್, ಅತ್ಯಾಚಾರ ಕೇಸ್ | 6 ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ



















