ಅಕ್ರಾ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಘಾನಾ ಸಂಸತ್ ಭವನದ ಐತಿಹಾಸಿಕ ಭಾಷಣದ ವೇಳೆ, ಘಾನಾದ ಇಬ್ಬರು ಸಂಸದರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಸಾಂಸ್ಕೃತಿಕ ಗೌರವವು ಭಾರತ ಮತ್ತು ಘಾನಾ ನಡುವಿನ ಆಳವಾದ ಬಾಂಧವ್ಯವನ್ನು ಎತ್ತಿ ಹಿಡಿದಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಕಿಮ್ ಓಡಾ ಕ್ಷೇತ್ರದ ಸಂಸದ ಅಲೆಕ್ಸಾಂಡರ್ ಅಕ್ವಾಸಿ ಅಕ್ವಾಹ್ ಅವರು ಕೆನೆ ಬಣ್ಣದ ಶೇರ್ವಾನಿ ಧರಿಸಿ ಬಂದಿದ್ದಲ್ಲದೆ, ತಲೆಗೆ ಟರ್ಬನ್ ಧರಿಸಿ ಭಾರತೀಯ ಮದುಮಗನಂತೆ ಕಂಗೊಳಿಸಿದರೆ, ಮಹಿಳಾ ಸಂಸದೆ ಭಾರತೀಯ ಸಾಂಪ್ರದಾಯಿಕ ಚೂಡಿದಾರ್ ಧರಿಸಿಕೊಂಡು ಬಂದಿದ್ದರು.
ಈ ಅನಿರೀಕ್ಷಿತ ಮತ್ತು ಸುಂದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಾನಾ ಸಂಸತ್ ಭವನದ ಸ್ಪೀಕರ್ ಅಲ್ಬನ್ ಸುಮನಾ ಕಿಂಗ್ಸ್‌ಫೋರ್ಡ್ ಬಾಗ್ಬಿನ್ ಈ ಸಾಂಸ್ಕೃತಿಕ ಗೌರವವನ್ನು ಮುಕ್ತವಾಗಿ ಶ್ಲಾಘಿಸಿದರು. “ನನ್ನ ಗಮನಕ್ಕೆ ಬಂದಂತೆ, ಸಂಸದರಿಬ್ಬರೂ ಅಪ್ಪಟ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬಂದಿದ್ದಾರೆ. ಭಾರತ, ಅಲ್ಲಿನ ಜನರು ಮತ್ತು ಸಂಸ್ಕೃತಿಯ ಬಗ್ಗೆ ತೋರಿದ ಪ್ರೀತಿಗೆ ಧನ್ಯವಾದ,” ಎಂದು ಅವರು ಹೇಳಿದ್ದಾರೆ.

ಕಳೆದ 30 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಘಾನಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. 3 ದಶಕಗಳ ಬಳಿಕ ಆ ದೇಶಕ್ಕೆ ಹೋದ ಮೊದಲ ಭಾರತೀಯ ಪ್ರಧಾನಿ ಎಂಬ ಖ್ಯಾತಿ ಪ್ರಧಾನಿ ಮೋದಿಯವರು ಪಾತ್ರರಾಗಿದ್ದಾರೆ. ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಭಾರತದ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಬಗ್ಗೆ ಉಲ್ಲೇಖಿಸಿದಾಗ, ಘಾನಾದ ಸಂಸದರಲ್ಲಿ ಆಶ್ಚರ್ಯ ಮತ್ತು ನಗೆಯ ತರಂಗ ಮೂಡಿತು. “ಭಾರತವು ಜಗತ್ತಿನ ಪ್ರಜಾಪ್ರಭುತ್ವದ ತಾಯಿ. ನಮಗೆ ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಸಾವಿರಾರು ವರ್ಷಗಳಿಂದಲೂ ಇರುವ ನಮ್ಮ ಮೂಲಭೂತ ಮೌಲ್ಯವಾಗಿದೆ,” ಎಂದು ಮೋದಿ ಪ್ರತಿಪಾದಿಸಿದರು.
ಈ ಭೇಟಿಯ ವೇಳೆ, ಘಾನಾ ಅಧ್ಯಕ್ಷ ಜಾನ್ ಡ್ರಮಾನಿ ಮಹಾಮಾ ಅವರು ಪ್ರಧಾನಿ ಮೋದಿಯವರಿಗೆ ಘಾನಾದ ಅತ್ಯುನ್ನತ ನಾಗರಿಕ ಗೌರವವಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಗೌರವವನ್ನು ಮೋದಿ ಅವರು ಭಾರತ-ಘಾನಾ ಸ್ನೇಹಕ್ಕೆ ಸಮರ್ಪಿಸಿದರು. ಈ ಐತಿಹಾಸಿಕ ಭೇಟಿಯು ಭಾರತ ಮತ್ತು ಘಾನಾ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದ್ದು, ಸಾಂಸ್ಕೃತಿಕ ಒಡನಾಟದ ಈ ಕ್ಷಣವು ಎರಡೂ ದೇಶಗಳ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದೂ ಮೋದಿ ಹೇಳಿದರು.