ನವದೆಹಲಿ: ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್‌ಅಪ್ ‘ರಿವರ್ ಮೊಬಿಲಿಟಿ’, ತನ್ನ ಜನಪ್ರಿಯ ‘ಇಂಡಿ’ ಎಲೆಕ್ಟ್ರಿಕ್ ಸ್ಕೂಟರ್‌ನ ಮೂರನೇ ತಲೆಮಾರಿನ (Gen 3) ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವು ತಾಂತ್ರಿಕ ಮತ್ತು ಯಾಂತ್ರಿಕ ನವೀಕರಣಗಳೊಂದಿಗೆ ಬಂದಿರುವ ಈ ಹೊಸ ಸ್ಕೂಟರ್, ರೂ. 1.46 ಲಕ್ಷ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ‘ಸ್ಕೂಟರ್‌ಗಳ ಎಸ್‌ಯುವಿ’ ಎಂದೇ ಖ್ಯಾತಿ ಪಡೆದಿರುವ ಇಂಡಿ, ತನ್ನ ವಿಶಿಷ್ಟ ವಿನ್ಯಾಸ ಮತ್ತು ಪ್ರಾಯೋಗಿಕತೆಯಿಂದಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಸ್ವೀಕಾರವನ್ನು ಪಡೆದಿದ್ದು, ಈ ಹೊಸ ಆವೃತ್ತಿಯು ಅದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
“ಏನೆಲ್ಲಾ ಹೊಸತಿದೆ Gen-3 ಇಂಡಿಯಲ್ಲಿ”?
ಮೂರನೇ ತಲೆಮಾರಿನ ಇಂಡಿ ಸ್ಕೂಟರ್‌ನಲ್ಲಿ, ದೈನಂದಿನ ಬಳಕೆಯನ್ನು ಸುಧಾರಿಸುವ ಮತ್ತು ತಂತ್ರಜ್ಞಾನವನ್ನು ಸೇರಿಸುವ ಜತೆಗೆ ಗುರಿಯೊಂದಿಗೆ ಹಲವು ಅಪ್ಡೇಟ್ಗಳನ್ನು ಮಾಡಲಾಗಿದೆ. ಉತ್ತಮ ಹಿಡಿತ ಮತ್ತು ರಸ್ತೆ ಸ್ಥಿರತೆಯನ್ನು ನೀಡುವ ಹೊಸ ಟೈರ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚು ಸ್ಪಷ್ಟವಾಗಿ ಓದಬಹುದಾದ ಹೊಸ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದು ರೇಂಜ್ ಮತ್ತು ಚಾರ್ಜಿಂಗ್ ಮಾಹಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮೊಬೈಲ್ ಆ್ಯಪ್ ಸಂಪರ್ಕವನ್ನು ಸುಧಾರಿಸಲಾಗಿದ್ದು, ಇದು ರೈಡಿಂಗ್ ಅಂಕಿಅಂಶಗಳು, ರಿಯಲ್-ಟೈಮ್ ಚಾರ್ಜಿಂಗ್ ಸ್ಥಿತಿ ಮತ್ತು ಗ್ರಾಹಕೀಯಗೊಳಿಸಬಹುದಾದ ಡೇಟಾ ಪಾಯಿಂಟ್‌ಗಳನ್ನು ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಬೆಟ್ಟ-ಗುಡ್ಡಗಳ ಪ್ರದೇಶದಲ್ಲಿ ಸ್ಕೂಟರ್ ಹಿಂದಕ್ಕೆ ಉರುಳದಂತೆ ತಡೆಯುವ ‘ಹಿಲ್-ಹೋಲ್ಡ್ ಅಸಿಸ್ಟ್’ ವೈಶಿಷ್ಟ್ಯವನ್ನು ಹೊಸದಾಗಿ ಸೇರಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ, ಸ್ಕೂಟರ್‌ನ ರೈಡಿಂಗ್ ಡೈನಾಮಿಕ್ಸ್ ಅನ್ನು ಮತ್ತಷ್ಟು ಸುಧಾರಿಸಲಾಗಿದೆ.
“ವಿನ್ಯಾಸ ಮತ್ತು ಪ್ರಾಯೋಗಿಕತೆ: ಇಂಡಿಯ ವಿಶೇಷತೆ”
ಇಂಡಿ ಸ್ಕೂಟರ್ ತನ್ನ ಪ್ರಾಯೋಗಿಕತೆಗೆ ಹೆಸರುವಾಸಿಯಾಗಿದೆ. 43 ಲೀಟರ್‌ನ ಬೃಹತ್ ಅಂಡರ್-ಸೀಟ್ ಸ್ಟೋರೇಜ್ ಮತ್ತು 12 ಲೀಟರ್‌ನ ಮುಂಭಾಗದ ಗ್ಲೋವ್ ಬಾಕ್ಸ್ ಇದರ ಪ್ರಮುಖ ಆಕರ್ಷಣೆ. ಇದೀಗ, ಮಾನ್ಸೂನ್ ಬ್ಲೂ, ಸಮ್ಮರ್ ರೆಡ್, ಸ್ಟಾರ್ಮ್ ಗ್ರೇ, ವಿಂಟರ್ ವೈಟ್ ಮತ್ತು ಸ್ಪ್ರಿಂಗ್ ಯೆಲ್ಲೋ ಎಂಬ ಐದು ಹೊಸ ಬಣ್ಣಗಳ ಆಯ್ಕೆಯಲ್ಲಿ ಇದು ಲಭ್ಯವಿದೆ. 14-ಇಂಚಿನ ವೀಲ್‌ಗಳು ಮತ್ತು 165 ಮಿ.ಮೀ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವುದರಿಂದ, ಇದನ್ನು ‘ಸ್ಕೂಟರ್‌ಗಳ ಎಸ್‌ಯುವಿ’ ಎಂದು ಕರೆಯಲಾಗುತ್ತದೆ. ಎರಡು ಯುಎಸ್‌ಬಿ ಪೋರ್ಟ್‌ಗಳು, ಫಾರ್ವರ್ಡ್ ಮತ್ತು ರಿವರ್ಸ್ ಪಾರ್ಕಿಂಗ್ ಅಸಿಸ್ಟ್, ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಇದರ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.
“ಪವರ್‌ಟ್ರೇನ್ ಮತ್ತು ಕಾರ್ಯಕ್ಷಮತೆ”
Gen-3 ಇಂಡಿಯಲ್ಲಿ ಪವರ್‌ಟ್ರೇನ್‌ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಪ್ರತಿ ಚಾರ್ಜ್‌ಗೆ 163 ಕಿ.ಮೀ. IDC ರೇಂಜ್ ನೀಡುತ್ತದೆ (ನೈಜ ಜಗತ್ತಿನಲ್ಲಿ ಸುಮಾರು 110 ಕಿ.ಮೀ.). ಇದರಲ್ಲಿ ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡಿಂಗ್ ಮೋಡ್‌ಗಳಿವೆ. ಇದರ ಎಲೆಕ್ಟ್ರಿಕ್ ಮೋಟಾರ್ 8.9hp ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಗಂಟೆಗೆ 90 ಕಿ.ಮೀ. ಗರಿಷ್ಠ ವೇಗವನ್ನು ಹೊಂದಿದೆ. 750W ಚಾರ್ಜರ್ ಬಳಸಿ, 0-80% ಚಾರ್ಜ್ ಮಾಡಲು ಸುಮಾರು 5 ಗಂಟೆ ಬೇಕಾಗಹುದು. ಸುರಕ್ಷತೆಗಾಗಿ, ಎರಡೂ ವೀಲ್‌ಗಳಿಗೂ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಕಾಂಬಿ-ಬ್ರೇಕಿಂಗ್ ಸಿಸ್ಟಮ್ (CBS) ನೀಡಲಾಗಿದೆ.
“ಉತ್ತರ ಭಾರತಕ್ಕೂ ವಿಸ್ತರಣೆ”
ಈ ಹೊಸ ಸ್ಕೂಟರ್ ಬಿಡುಗಡೆಯೊಂದಿಗೆ, ರಿವರ್ ಮೊಬಿಲಿಟಿಯು ದೆಹಲಿಯ ರಾಜೌರಿ ಗಾರ್ಡನ್‌ನಲ್ಲಿ ತನ್ನ ಮೊದಲ ಶೋರೂಂ ಅನ್ನು ತೆರೆಯುವ ಮೂಲಕ ಉತ್ತರ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಪ್ರಸ್ತುತ ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಕೊಚ್ಚಿ ಮತ್ತು ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ 34 ಮಳಿಗೆಗಳನ್ನು ಹೊಂದಿರುವ ಕಂಪನಿಯು, ಮುಂದಿನ ವರ್ಷ ಮಾರ್ಚ್ ವೇಳೆಗೆ ತನ್ನ ಮಳಿಗೆಗಳ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಹೊಸ ಮಳಿಗೆಗಳನ್ನು ತೆರೆಯುವ ಮೂಲಕ, ರಿವರ್ ಮೊಬಿಲಿಟಿಯು ದೇಶಾದ್ಯಂತ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಸಜ್ಜಾಗಿದೆ.