ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ. ಎನ್ ಅಶ್ವಥ್ ನಾರಾಯಣ್ ವಿರೋಧಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್, ಬೆಂಗಳೂರಿನಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿತ್ತು. ಈಗ ಜಿಬಿಎ ಮೂಲಕ ರಾಜಕೀಯ ಝಲಕ್ ತೋರಿಸಿದೆ. ಕಾಂಗ್ರೆಸ್ ಸರ್ಕಾರದ ರಾಜಕೀಯ ಹುನ್ನಾರ ಜಿಬಿಎ ರಚನೆ ಹಿಂದೆ ಇದೆ. ಬೆಂಗಳೂರಿಗೆ ಜಿಬಿಎ ಮಾರಕ, ಇದರ ಹಿಂದೆ ಹುನ್ನಾರ ಇದೆ ಎನ್ನುವುದು ಸ್ಪಷ್ಟ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ರಾಜಕೀಯ ದುರುದ್ದೇಶ, ಸಂವಿಧಾನ ಬಾಹಿರ ನಡೆ. ಬೆಂಗಳೂರು ವಿಭಜಿಸಿ ಹೇಗಾದರೂ ಅಧಿಕಾರ ಪಡೆಯಬೇಕೆಂಬ ದುರುದ್ದೇಶ ಕಾಂಗ್ರೆಸ್ ಅವರದ್ದು, ಕಾಂಗ್ರೆಸ್ ಬೆಂಗಳೂರಿನಲ್ಲಿ ಅಧಿಕಾರಕ್ಕೆ ಬಂದರೆ ಏನೂ ಅಭಿವೃದ್ಧಿ ಆಗುವುದಿಲ್ಲ. ಬೆಂಗಳೂರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಜಿಬಿಎ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದಲಾದರೂ ಕಾಂಗ್ರೆಸ್ ವರ್ಚಸ್ಸು ಬೆಂಗಳೂರಿನಲ್ಲಿ ವೃದ್ಧಿಯಾಗುತ್ತದೆಯೇ ಎಂದು ನೋಡುವುದಕ್ಕೆ ಜಿಬಿಎ ಅಸ್ತಿತ್ವಕ್ಕೆ ತರಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.



















