ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾದ ನಂತರ, ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ತನ್ನ ಚೊಚ್ಚಲ ಬಜೆಟ್ ಮಂಡಿಸುತ್ತಿದೆ. ಐದು ಪ್ರತ್ಯೇಕ ನಗರ ಪಾಲಿಕೆಗಳ ಪೈಕಿ ಇಂದು ಎರಡು ಪಾಲಿಕೆಗಳು ತಮ್ಮ ಆಯವ್ಯಯವನ್ನು ಮಂಡಿಸಲಿವೆ.
ಪಾಲಿಕೆಯಲ್ಲಿ ಸದ್ಯ ಜನಪ್ರತಿನಿಧಿಗಳು ಇಲ್ಲದ ಕಾರಣ, ಜಿಬಿಎ ಕಮೀಷನರ್ ಮಹೇಶ್ವರ್ ಅಧ್ಯಕ್ಷತೆಯಲ್ಲಿ ಪಾಲಿಕೆ ಆಯುಕ್ತರೇ ಬಜೆಟ್ ಮಂಡಿಸುತ್ತಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಇಂದು ಗರುಡಚಾರಪಾಳ್ಯದ ಎಂ.ಎಲ್.ಆರ್ ಕನ್ವೆಂಷನ್ ಸೆಂಟರ್‌ನಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಪೂರ್ವ ನಗರ ಪಾಲಿಕೆಗಳು ತಲಾ ₹4,000 ರಿಂದ ₹4,200 ಕೋಟಿ ಗಾತ್ರದ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಐದೂ ಪಾಲಿಕೆಗಳ ಒಟ್ಟು ಬಜೆಟ್ ₹20,000 ಕೋಟಿ ಮೀರುವ ಅಂದಾಜಿದೆ.
ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ:
- ರಸ್ತೆ ಮತ್ತು ಫುಟ್‌ಪಾತ್: ರಸ್ತೆ ಗುಂಡಿ ಮುಚ್ಚುವುದು, ಹೊಸ ಫುಟ್‌ಪಾತ್ ಮತ್ತು ಸೈವಾಕ್ ನಿರ್ಮಾಣಕ್ಕೆ ಒತ್ತು.
- ರಾಜಕಾಲುವೆ: ಮಳೆಗಾಲದ ಪ್ರವಾಹ ತಡೆಗೆ ರಾಜಕಾಲುವೆಗಳ ಅಭಿವೃದ್ಧಿ.
- ತ್ಯಾಜ್ಯ ನಿರ್ವಹಣೆ: ಕಸ ವಿಲೇವಾರಿ ವ್ಯವಸ್ಥೆ ಸುಧಾರಣೆ ಮತ್ತು ಉದ್ಯಾನವನಗಳ ಅಭಿವೃದ್ಧಿ.
ಜನಸಾಮಾನ್ಯರ ಸೇವೆ ಮತ್ತು ಆರೋಗ್ಯ
- ನಮ್ಮ ಕ್ಲಿನಿಕ್: ಪಾಲಿಕೆ ಆಸ್ಪತ್ರೆಗಳು ಮತ್ತು ನಮ್ಮ ಕ್ಲಿನಿಕ್‌ಗಳ ಉನ್ನತೀಕರಣ.
- ಇಂದಿರಾ ಕ್ಯಾಂಟಿನ್: ಕ್ಯಾಂಟಿನ್ ಮೆನು ಸುಧಾರಣೆ ಮತ್ತು ಹೊಸ ಘೋಷಣೆಗಳ ನಿರೀಕ್ಷೆ ಇದೆ.
- ನಗರ ಸೌಂದರ್ಯ: ಪ್ರಮುಖ ಜಂಕ್ಷನ್‌ಗಳ ಸುಂದರೀಕರಣ ಮತ್ತು ಹೊಸ ಬೀದಿ ದೀಪಗಳ ಅಳವಡಿಕೆ.
ಆದಾಯ ಸಂಗ್ರಹಕ್ಕೆ ಹೊಸ ಯೋಜನೆ
ಜಿಬಿಎ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಕಠಿಣ ಕ್ರಮಗಳಿಗೆ ಮುಂದಾಗಿದೆ. ಇದಕ್ಕಾಗಿ ‘ಮುನ್ಸಿಪಲ್ ಬಾಂಡ್’ ಬಿಡುಗಡೆ ಮಾಡುವ ಮೂಲಕ ಹಣ ಸಂಗ್ರಹಿಸುವ ಯೋಚನೆ ಮಾಡಲಾಗಿದೆ. ಇದರೊಂದಿಗೆ ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಮತ್ತು ಪಾರ್ಕಿಂಗ್ ಶುಲ್ಕ ವಸೂಲಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಘೋಷಿಸುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಜಿಬಿಎ ಅಡಿಯಲ್ಲಿ ಮಂಡನೆಯಾಗುತ್ತಿರುವ ಈ ಮೊದಲ ಬಜೆಟ್ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸ್ನಾನದ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಯುವತಿ ಆತ್ಮಹತ್ಯೆ – ಕಾರಣ ನಿಗೂಢ!



















