ಬೆಂಗಳೂರು : ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ಐದು ನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂರಕ್ಷಣೆಗೆ ಶೆಲ್ಟರ್‌ಗಳನ್ನು ನಿರ್ಮಿಸಲು ಒಟ್ಟು 15 ಎಕರೆ ಜಾಗವನ್ನು ಗುರುತಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಬೀದಿ ಬದಿ ಅಲೆದಾಡುತ್ತಿರುವ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಕ್ರೂರ ಸ್ವಭಾವದ ನಾಯಿಗಳನ್ನು ಶೆಲ್ಟರ್‌ಗಳಲ್ಲಿ ಇರಿಸಿ ಸಂರಕ್ಷಣೆ ಮಾಡಲು ಯೋಜನೆ ರೂಪಿಸಲಾಗಿದೆ.
ಜಿಡಿಎ ವ್ಯಾಪ್ತಿಯಲ್ಲಿ ಸುಮಾರು 2.69 ಲಕ್ಷ ಬೀದಿ ನಾಯಿಗಳು ಇದ್ದು, ಅವುಗಳಲ್ಲಿ ಈಗಾಗಲೇ ಐದು ನಗರಪಾಲಿಕೆಗಳಲ್ಲಿ ಸುಮಾರು 2,500 ಕ್ರೂರ ನಾಯಿಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ನಗರಪಾಲಿಕೆ ವ್ಯಾಪ್ತಿಯಲ್ಲಿ 2 ರಿಂದ 3 ಎಕರೆ ಭೂಮಿಯನ್ನು ಶೆಲ್ಟರ್ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಪ್ರಾಣಿ ನಿಯಂತ್ರಣ ಕಾಯ್ದೆಯ ಅನ್ವಯ ಟೆಂಡರ್ ಕರೆಯಲಾಗಿದ್ದು, ಒಟ್ಟು ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಐದು ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತದೆ.
ಪ್ರತಿ ಶೆಲ್ಟರ್‌ನಲ್ಲಿ 500 ರಿಂದ 600 ನಾಯಿಗಳಿಗೆ ಆಶ್ರಯ ಕಲ್ಪಿಸಲಾಗುತ್ತದೆ. ನಾಯಿಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಡಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ನಗರದ ಹೊರವಲಯ ಪ್ರದೇಶಗಳಾದ ಭಂಗೀಪುರ ಮತ್ತು ಮಹದೇವಪುರದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಬೀದಿ ನಾಯಿಗಳ ಪಾಲನೆ-ಪೋಷಣೆ ಹಾಗೂ ಸಂರಕ್ಷಣೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : 15 ದಿನಗಳಲ್ಲೇ ರೇಷನ್ ಕಾರ್ಡ್ ಬೇಕಾ? ಹಾಗಾದರೆ ಹೀಗೆ ಮಾಡಿ!



















