ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಬಂಧಿಸಿದ ಜಾಹೀರಾತು ಶುಲ್ಕ ಮತ್ತು ನಿಯಮ ಉಲ್ಲಂಘನೆ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೇಂದ್ರ ನಗರ ಪಾಲಿಕೆಯ ಜಾಹೀರಾತು ವಿಭಾಗದ ಅಧಿಕಾರಿಗಳು, 2020ರ ಕಾಯ್ದೆ ಮತ್ತು ಬೈಲಾ ಪ್ರಕಾರ, ವಿಶೇಷವಾಗಿ ಸೆಕ್ಷನ್ 158 ಅಡಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಗೆ ಎರಡು ಪುಟಗಳ ನೋಟೀಸ್ ಜಾರಿ ಮಾಡಿ, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಕ್ರೀಡಾಂಗಣದ ಒಳಗೆ ಮತ್ತು ಹೊರಭಾಗದಲ್ಲಿ ದೊಡ್ಡ ಮಟ್ಟದಲ್ಲಿ LED ಬೋರ್ಡ್‌ಗಳು ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಇದಕ್ಕಾಗಿ ಮುಖ್ಯ ಆಯುಕ್ತರ ಲಿಖಿತ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ, ಜಾಹೀರಾತು ಪ್ರದರ್ಶನಕ್ಕೆ ಅಗತ್ಯವಾದ ಶುಲ್ಕವನ್ನು ಪಾವತಿಸಿಲ್ಲ ಎಂಬುದೂ ನೋಟೀಸ್‌ನಲ್ಲಿ ಉಲ್ಲೇಖವಾಗಿದೆ
ಕಾಯ್ದೆ ಏನು ಹೇಳುತ್ತದೆ?
ಸೆಕ್ಷನ್ 158 ಪ್ರಕಾರ, ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅನುಮತಿಯಿಲ್ಲದೆ ಜಾಹೀರಾತು ಪ್ರದರ್ಶನ ನಡೆಸುವುದು ಕಾನೂನುಬಾಹಿರ. ಉಲ್ಲಂಘನೆ ಮಾಡಿದರೆ 2 ಲಕ್ಷವರೆಗೆ ದಂಡ ಹಾಗೂ 1 ವರ್ಷವರೆಗೆ ಜೈಲು ಶಿಕ್ಷೆಯೂ ವಿಧಿಸಬಹುದು.
ನಗರಪಾಲಿಕೆ ನೋಟೀಸ್‌ನ ಸೂಚನೆಗಳು:
7 ದಿನಗಳೊಳಗೆ ಅನಧಿಕೃತ LED ಬೋರ್ಡ್‌ಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ನಗರಪಾಲಿಕೆಯೇ ತೆರವುಗೊಳಿಸಿ ವೆಚ್ಚವನ್ನು ವಸೂಲಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಜಾಹೀರಾತು ಶುಲ್ಕ ಮತ್ತು ದಂಡ ವಿಧಿಸುವುದರೊಂದಿಗೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆಯೂ ಸೂಚಿಸಲಾಗಿದೆ.
ವಿವಾದಕ್ಕೆ ಕಾರಣವಾದ ಸಂಗತಿಗಳು:
KSCAಗೆ ನೋಟೀಸ್ ನೀಡಿದರೂ, ಅದರ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಅಧಿಕಾರಿಗಳು ಹಿಂಜರಿಯುತ್ತಿರುವುದು ಪ್ರಶ್ನೆಗೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲ ಅಧಿಕಾರಿಗಳಿಗೆ KSCA ಜೊತೆ ನಿಕಟ ಸಂಪರ್ಕವಿದೆ ಎಂಬ ಮಾತುಗಳೂ ಹರಿದಾಡುತ್ತಿವೆ. ಮೂಲಗಳ ಪ್ರಕಾರ, ಕಳೆದ ವರ್ಷವೂ ಇದೇ ವಿಷಯವಾಗಿ ನೋಟೀಸ್ ನೀಡಲಾಗಿದ್ದರೂ, ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ ಎಂದು ತಿಳಿದುಬಂದಿದೆ.
ಐಪಿಎಲ್ ಪಂದ್ಯಗಳ ಸಮಯದಲ್ಲಿ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿರುವುದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಜಾಹೀರಾತುಗಳಿಂದ ಕೋಟ್ಯಾಂತರ ಆದಾಯ ಬರುತ್ತಿದ್ದರೂ ನಗರಪಾಲಿಕೆಗೆ ಶುಲ್ಕ ಪಾವತಿಸದಿರುವುದೇಕೆ ಎಂಬುದರ ಮೇಲೂ ಚರ್ಚೆ ನಡೆಯುತ್ತಿದೆ. ನೋಟೀಸ್ ಮಾಹಿತಿ ಬಹಿರಂಗಪಡಿಸಲು ವಿಳಂಬವಾಗಿರುವುದೂ ಅನುಮಾನಗಳಿಗೆ ಕಾರಣವಾಗಿದೆ.
ಈ ಬೆಳವಣಿಗೆ ನಗರಪಾಲಿಕೆ ಮತ್ತು ಕ್ರಿಕೆಟ್ ಸಂಸ್ಥೆಯ ನಡುವಿನ ಘರ್ಷಣೆಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ನಗರಪಾಲಿಕೆ ಕೈಗೊಳ್ಳುವ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ.


















