ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ1500 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡಗಳ ಸೆಟ್‌ಬ್ಯಾಕ್‌ನಲ್ಲಿ ಭಾರಿ ಕಡಿತ ಮಾಡಿ ನಗರಾಭಿವೃದ್ಧಿ ಇಲಾಖೆಯು ಅಂತಿಮ ಅಧಿಸೂಚನೆ ಹೊರಡಿಸಿದೆ.
600 ಚ.ಅಡಿ (60 ಚ.ಮೀ) ವಿಸ್ತೀರ್ಣದ ನಿವೇಶನದಲ್ಲಿನಿರ್ಮಿಸುವ ಕಟ್ಟಡಗಳ ಹಿಂಭಾಗದಲ್ಲಿ ಸೆಟ್‌ಬ್ಯಾಕ್ ಬಿಡುವಂತಿಲ್ಲ. ಮುಂಭಾಗದಲ್ಲಿ0.75 ಮೀಟರ್ (ಎರಡೂವರೆ ಅಡಿ), ಎಡ ಅಥವಾ ಬಲ ಭಾಗದ ಯಾವುದಾದರೂ ಒಂದು ಕಡೆ 0.6 ಮೀಟರ್ (ಎರಡು ಅಡಿ) ಸೆಟ್‌ಬ್ಯಾಕ್ ನಿಗದಿಪಡಿಸಲಾಗಿದೆ.
ಇತ್ತೀಚೆಗೆ, ಸೆಟ್ ಬ್ಯಾಕ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿತ್ತು. ನಿವೇಶನದ ಉದ್ದ ಮತ್ತು ಅಗಲಕ್ಕೆ ಅನುಗುಣವಾಗಿ ಸೆಟ್‌ಬ್ಯಾಕ್ ನಿಗದಿಪಡಿಸುವುದನ್ನು ಕೈಬಿಟ್ಟು, ಚ.ಮೀ.ಗೆ ಅನುಗುಣವಾಗಿ ಸೆಟ್‌ಬ್ಯಾಕ್ ನಿಗದಿಪಡಿಸಲಾಗಿದೆ. 4000 ಚ.ಮೀ. ನಿವೇಶನದಲ್ಲಿನಿರ್ಮಿಸುವ ಕಟ್ಟಡದ ಸುತ್ತಲೂ ಕನಿಷ್ಠ 5 ಮೀಟರ್ ಸೆಟ್‌ಬ್ಯಾಕ್ ಬಿಡಬೇಕೆಂದು ನಿಯಮ ರೂಪಿಸಲಾಗಿದೆ. 1500 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿನಿರ್ಮಿಸುವ ಕಟ್ಟಡಗಳಿಗೆ ಹೊಸ ಸೆಟ್‌ಬ್ಯಾಕ್‌ನಲ್ಲಿಕಡಿಮೆ ಜಾಗ ನಿಗದಿಪಡಿಸಲಾಗಿದೆ. ಈ ಸೆಟ್‌ಬ್ಯಾಕ್ ನಿಯಮವು ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಿಗೂ ಅನ್ವಯಿಸುತ್ತದೆ.
ಈ ಹಿಂದಿನ ನಿಯಮಗಳ ಪ್ರಕಾರ 600 ಚ.ಅಡಿ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡದ ಸುತ್ತಲೂ ಒಂದು ಮೀಟರ್ (3 ಅಡಿ 4 ಇಂಚು) ಜಾಗ ಬಿಡಬೇಕಿತ್ತು. 1200 ಚ.ಅಡಿ ನಿವೇಶನದ ಕಟ್ಟಡಗಳ ಸುತ್ತಲೂ 1.50 ಮೀಟರ್ (5 ಅಡಿ) ಸೆಟ್‌ಬ್ಯಾಕ್ ಬಿಡಬೇಕಿತ್ತು. ಅಂತಿಮ ಅಧಿಸೂಚನೆಯಲ್ಲಿನಿಗದಿಪಡಿಸಿರುವ ಸೆಟ್‌ಬ್ಯಾಕ್‌ನಂತೆಯೇ ಸ್ಟಿಲ್ಟ್ ಸೇರಿದಂತೆ 4 ಅಂತಸ್ತಿನ ಕಟ್ಟಡಗಳನ್ನು 12 ಮೀಟರ್ ಎತ್ತರ ಮೀರದಂತೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 750 ಚ.ಮೀ. ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿಸೆಟ್‌ಬ್ಯಾಕ್ ಪ್ರದೇಶದಲ್ಲಿತೆರೆದ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳಬಹುದು.
ಕಾರುಗಳನ್ನು ಮೇಲಸ್ತುಗಳಿಗೆ ಲಿಫ್ಟ್ ಮಾಡಲು ಅವಕಾಶ |
ಸೆಟ್‌ಬ್ಯಾಕ್ ಹೊರತುಪಡಿಸಿ ರ್ಯಾಂಪ್ ನಿರ್ಮಾಣ ನಿಯಮ ಕೈಬಿಡಲಾಗಿದೆ. ಸೆಟ್‌ಬ್ಯಾಕ್ ಬಿಟ್ಟಿರುವ ಜಾಗದಲ್ಲಿವಾಹನಗಳಿಗೆ ರ್ಯಾಂಪ್ ನಿರ್ಮಿಸಿಕೊಳ್ಳಬಹುದು. ಆ ಜಾಗದಿಂದಲೇ ಕಾರುಗಳನ್ನು ಕೆಳ ಅಥವಾ ಮೇಲಿನ ಅಂತಸ್ತುಗಳಿಗೆ ಲಿಫ್ಟ್ ಮಾಡುವ ಅವಕಾಶವನ್ನೂ ನೀಡಲಾಗಿದೆ.
ಸೆಟ್‌ಬ್ಯಾಕ್ ಕಡಿತ, ಕಟ್ಟಡದ ಎತ್ತರ ಏರಿಕೆ |
ಬೆಂಗಳೂರಿನಲ್ಲಿ 1200 ಚದರ ಅಡಿವರೆಗಿನ ಸಣ್ಣ ನಿವೇಶನಗಳಲ್ಲಿ ಮನೆ ಕಟ್ಟುವವರಿಗೆ ಸೆಟ್‌ಬ್ಯಾಕ್ ನಿಯಮಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಹೆಚ್ಚುವರಿ ಅಂತಸ್ತುಗಳ ನಿರ್ಮಾಣಕ್ಕೆ ಅವಕಾಶ ಸಿಗಲಿದೆ. ಇಂತಹ ಕಟ್ಟಡಗಳಿಗೆ ಸಿಸಿ ಮತ್ತು ಒಸಿ ಪಡೆಯುವ ಜವಾಬ್ದಾರಿಯಿಂದ ವಿನಾಯಿತಿ ನೀಡಲು ಚಿಂತನೆ ನಡೆಸಲಾಗಿದ್ದು, ವಾಹನ ನಿಲುಗಡೆಗೆ ತಳಮಹಡಿಯನ್ನು ಕಡ್ಡಾಯವಾಗಿ ಮೀಸಲಿಡಲು ಸೂಚಿಸಲಾಗಿದೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದ್ದು, ಇದು ನಗರದ ಸಣ್ಣ ನಿವೇಶನದಾರರಿಗೆ ದೊಡ್ಡ ಸಮಾಧಾನ ತರಲಿದೆ. ಈ ಹೊಸ ಬದಲಾವಣೆಗಳು ಬೆಂಗಳೂರಿನ ವಸತಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ತರುವ ನಿರೀಕ್ಷೆಯಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.
ಇದನ್ನೂ ಓದಿ : ಕಾಂತಾರ ಬಳಿಕ ಯಶ್ ‘ಟಾಕ್ಸಿಕ್’ ಅಡ್ಡಕ್ಕೆ ರುಕ್ಮಿಣಿ ವಸಂತ್ | ಮೆಲಿಸಾ ಸ್ಟನ್ನಿಂಗ್ ಲುಕ್ಗೆ ಫ್ಯಾನ್ಸ್ ಫಿದಾ



















