ಬೆಂಗಳೂರು | ರಾಜರಾಜೇಶ್ವರಿನಗರ ಕ್ಷೇತ್ರದ ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣವಾದ “ಸುಖ ಬ್ರೂವೆರಿ ಮತ್ತು ಕಿಚ್ಚನ್” ಎಂಬ ಬಾರ್ & ರೆಸೋರೆಂಟ್‌ರಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಅರೋಪ ಕೇಳಿಬಂದಿದೆ. ಈ ಸಂಬಂಧ ಜಿಬಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಮತ್ತು ಅಬಕಾರಿ ಇಲಾಖೆ ಸೇರಿ 5 ಇಲಾಖೆಗಳ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಒಟ್ಟು 1.85 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 2000ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯದ ಬೃಹತ್ ಬಾರ್ & ರೆಸ್ಟೋರೆಂಟ್‌ರಲ್ಲಿ ಎರಡು ಪ್ರತ್ಯೇಕ ಸ್ವತ್ತುಗಳಿಗೆ ನಕ್ಷೆ ಮಂಜೂರಾತಿ ಪಡೆದು ಕಾನೂನುಬಾಹಿರವಾಗಿ ಒಂದೇ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ನಕ್ಷೆ ಮಂಜೂರಾತಿ ಶುಲ್ಕ ₹66.70 ಲಕ್ಷವನ್ನು ಸರ್ಕಾರದ ಖಾತೆಗೆ ಜಮೆ ಮಾಡದೇ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

JDTP ಮತ್ತು ADTP ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಲಂಚ ಪಡೆದು ನಕ್ಷೆ ಮಂಜೂರಾತಿ ಹಾಗೂ C.C. ಮತ್ತು O.C. ಇಲ್ಲದ ಕಟ್ಟಡಕ್ಕೆ ನೀರು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ನೀಡಿದ BWSSB ಮತ್ತು BESCOM ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಅನಧಿಕೃತ ಕಟ್ಟಡಕ್ಕೆ ಸೇವಾ ಸಂಪರ್ಕ ಕಲ್ಪಿಸಲಾಗಿದೆ ಎಂಬ ಆರೋಪವನ್ನು ಎನ್.ಆರ್ ರಮೇಶ್ ಮಾಡಿದ್ದಾರೆ.

ಇನ್ನು ಬೆಸ್ಕಾಂ ಅಧಿಕಾರಿಗಳು, ತಾತ್ಕಾಲಿಕ ಸಂಪರ್ಕದಿಂದಲೇ 1 ಮೆಗಾವಾಟ್ ವಿದ್ಯುತ್ ಬಳಕೆಗೆ ಅವಕಾಶ ನೀಡಿದ್ದು, ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಅನಧಿಕೃತ ಕಟ್ಟಡಕ್ಕೆ ವ್ಯಾಪಾರ ಪರವಾನಗಿ ನೀಡಿದ್ದಾರೆ ಎನ್ನಲಾಗಿದೆ. ಅಬಕಾರಿ ಇಲಾಖೆಯ ಉಪ ಆಯುಕ್ತರು ಸುಮಾರು 3 ಕೋಟಿ ಲಂಚ ಪಡೆದು “CL-7” ಮದ್ಯ ಪರವಾನಗಿ ನೀಡಿದ್ದಾರೆ ಎನ್ನಲಾಗಿದೆ. ಇದೇ ರೀತಿ ಭೂ ಪರಿವರ್ತನೆ, ನಕ್ಷೆ ಮಂಜೂರಾತಿ, C.C., O.C., ಅಗ್ನಿಶಾಮಕ NOC ಸೇರಿದಂತೆ ಹಲವು ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಸಂಪೂರ್ಣ ದಾಖಲೆಗಳೊಂದಿಗೆ ಹಗರಣದ ಬಗ್ಗೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯಕ್ಕೆ ಎನ್.ಆರ್ ರಮೇಶ್ ಅವರು ದೂರು ನೀಡಿದ್ದಾರೆ. 5 ಇಲಾಖೆಗಳ 9 ಭ್ರಷ್ಟ ಅಧಿಕಾರಿಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ನ್ಯಾಯಾಂಗ ತನಿಖೆ ಅಥವಾ CID ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೂ ಆಗ್ರಹಿಸಿ, ಭ್ರಷ್ಟಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡುವಂತೆ ಸರ್ಕಾರಕ್ಕೆ ಒತ್ತಾಯಸಿದ್ದಾರೆ.
ಇದನ್ನೂ ಓದಿ : ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ | ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದ ಜನ!



















