ನವದೆಹಲಿ : 2026ರ ಟಿ20 ವಿಶ್ವಕಪ್ಗೆ ಭಾರತ ಆತಿಥ್ಯ ವಹಿಸುತ್ತಿದೆ ಮತ್ತು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿಯೂ ಗುರುತಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿರಬಹುದು. ಆದರೆ, 2026ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಕನಸಿಗೆ ಎದುರಾಳಿ ತಂಡಗಳಿಗಿಂತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ ದೊಡ್ಡ ಅಡಿಯಾಗುವ ಸಾಧ್ಯತೆಯಿದೆ ಎಂಬ ಆಘಾತಕಾರಿ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಗಂಭೀರ್ ಅವರ ತಂತ್ರಗಾರಿಕೆ ಮತ್ತು ತಂಡದ ನಿರ್ವಹಣೆಯಲ್ಲಿನ ಕೆಲವು ನಡೆಗಳು ತಂಡಕ್ಕೆ ಅಪಾಯಕಾರಿಯಾಗಬಲ್ಲವು ಎಂದು ಕ್ರಿಕೆಟ್ ಪಂಡಿತರು ಎಚ್ಚರಿಸಿದ್ದಾರೆ. ಇದಕ್ಕೆ ಪ್ರಮುಖವಾಗಿ 3 ಕಾರಣಗಳನ್ನು ನೀಡಲಾಗುತ್ತಿದೆ.
ಅತಿಯಾದ ಪ್ರಯೋಗಗಳು (Over Experiment):
ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಗಂಭೀರ್ ಮತ್ತು ಅವರ ಸಿಬ್ಬಂದಿ ಸೂಕ್ತ ಆಡುವ 11ರ ಬಳಗವನ್ನು ಹುಡುಕುವ ಭರದಲ್ಲಿ ಅತಿಯಾದ ಪ್ರಯೋಗಗಳಿಗೆ ಕೈಹಾಕುತ್ತಿದ್ದಾರೆ. ತಂಡದ ಪ್ರತಿಯೊಂದು ವಿಭಾಗದಲ್ಲೂ ಹೊಸತನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಉದಾಹರಣೆಗೆ, ವೇಗಿ ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್ ಕೂಡ ಮಾಡಬಲ್ಲ ಆಲ್ ರೌಂಡರ್ ಆಗಿ ರೂಪಿಸಲು ಶ್ರಮಿಸುತ್ತಿದ್ದಾರೆ. ಇದು ಒಳ್ಳೆಯದೇ ಆದರೂ, ಸಂಜು ಸ್ಯಾಮ್ಸನ್ ಅವರಂತಹ ಪ್ರಮುಖ ಬ್ಯಾಟರ್ಗಳ ಕ್ರಮಾಂಕ ಬದಲಾವಣೆ ತಂಡದ ಸಮತೋಲನವನ್ನೇ ಕೆಡಿಸುತ್ತಿದೆ. 2025ರ ಏಷ್ಯಾಕಪ್ನಲ್ಲಿ ಟಾಪ್ ಆರ್ಡರ್ ಆಟಗಾರ ಸಂಜು ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಇಂತಹ ಪ್ರಯೋಗಗಳು ಈಗಾಗಲೇ ವಿಫಲವಾಗಿವೆ. ಇದೀಗ ಟಿ20 ವಿಶ್ವಕಪ್ನಲ್ಲೂ ಇದೇ ಪ್ರಯೋಗ ಮುಂದುವರಿದರೆ ತಂಡಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಆಟಗಾರರಿಗೆ ಸ್ಥಿರತೆ ಇಲ್ಲದಿರುವುದು (Unstable Roles) :
ನಿರಂತರ ಪ್ರಯೋಗಗಳಿಂದಾಗಿ ಆಟಗಾರರಿಗೆ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಸಂಜು ಸ್ಯಾಮ್ಸನ್ ಅವರ ಕ್ರಮಾಂಕ ಬದಲಾವಣೆ ಇದಕ್ಕೆ ಸಾಕ್ಷಿ. ಇನ್ನು ಅರ್ಶದೀಪ್ ಸಿಂಗ್ ಅವರಂತಹ ಅದ್ಭುತ ಬೌಲರ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಅವರನ್ನು ಆಡುವ 11ರ ಬಳಗದಿಂದ ಆಗಾಗ ಕೈಬಿಡಲಾಗುತ್ತಿದೆ. ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರನ್ನು ಯಾವುದೇ ಬಲವಾದ ಕಾರಣವಿಲ್ಲದೆ ಬೆಂಚ್ ಕಾಯುವಂತೆ ಮಾಡಲಾಗುತ್ತಿದೆ. ವಿಶೇಷವಾಗಿ 3ನೇ ಕ್ರಮಾಂಕಕ್ಕಾಗಿ ಶುಭಮನ್ ಗಿಲ್, ಸಾಯಿ ಸುದರ್ಶನ್, ಕರುಣ್ ನಾಯರ್ ಮತ್ತು ವಾಷಿಂಗ್ಟನ್ ಸುಂದರ್ ಹೀಗೆ ಹಲವರನ್ನು ಪರೀಕ್ಷಿಸಲಾಗಿದೆ. ಈ ರೀತಿಯ ಅನಿಶ್ಚಿತತೆ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.
ಬ್ಯಾಟರ್ಗಳ ಮೇಲಿನ ಅತಿಯಾದ ಅವಲಂಬನೆ (Overreliance on Batters):
ಗಂಭೀರ್ ಯುಗದಲ್ಲಿ ಬೌಲರ್ಗಳು ಕೂಡ ಬ್ಯಾಟಿಂಗ್ ಕಲಿಯಲೇಬೇಕಾದ ಒತ್ತಡದಲ್ಲಿದ್ದಾರೆ. ತಂಡದಲ್ಲಿ ಕುಲದೀಪ್ ಯಾದವ್, ಅರ್ಶದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಬ್ಯಾಟಿಂಗ್ ಮಾಡಬಲ್ಲವರೇ ಆಗಿರಬೇಕು ಎಂಬ ಹಠ ತಂಡದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಹರ್ಷಿತ್ ರಾಣಾ ಅವರಂತಹ ವೇಗದ ಬೌಲಿಂಗ್ ಆಲ್ ರೌಂಡರ್ಗಳನ್ನು ಸೇರಿಸಿಕೊಳ್ಳುವ ಮೂಲಕ ಬ್ಯಾಟಿಂಗ್ ಆಳವನ್ನು ಹೆಚ್ಚಿಸಲು ಗಂಭೀರ್ ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಸ್ಪೆಷಲಿಸ್ಟ್ ಬೌಲರ್ಗಳಿಗೆ ಜಾಗವಿಲ್ಲದಂತಾಗುತ್ತಿದೆ. ದಕ್ಷಿಣ ಆಫ್ರಿಕಾದ ಎಸ್ಎ20 ಮತ್ತು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ಗಳಲ್ಲಿ ಬೌಲರ್ಗಳು ಪಂದ್ಯ ಗೆಲ್ಲಿಸಿಕೊಡುವುದನ್ನು ನಾವು ನೋಡಿದ್ದೇವೆ. ಹೀಗಿರುವಾಗ, ಬ್ಯಾಟರ್ಗಳು ವಿಫಲವಾದರೆ ಪಂದ್ಯ ಉಳಿಸುವ ಬೌಲರ್ಗಳ ಕೊರತೆ ಭಾರತವನ್ನು ಕಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ | ಸಿಎಂ ಸಿದ್ದರಾಮಯ್ಯ ವಾಗ್ದಾಳಿ!



















