ಅಹ್ಮದಾಬಾದ್: ಕೋಟ್ಯಂತರ ರೂಪಾಯಿ ಇರುವವರು ಅದ್ಧೂರಿಯಾಗಿಯೇ ಮದುವೆಯಾಗುತ್ತಾರೆ. ದೇಶದ ಆಗರ್ಭ ಶ್ರೀಮಂತರಂತೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆಯಾಗುತ್ತಾರೆ. ಆದರೆ, ಲಕ್ಷಾಂತರ ಕೋಟಿ ರೂ. ಆಸ್ತಿ ಹೊಂದಿದ್ದರೂ ಗೌತಮ್ ಅದಾನಿ (Gautam Adani) ಅವರು ತಮ್ಮ ಪುತ್ರ ಜೀತ್ ಅದಾನಿ ಮದುವೆಯನ್ನು ಸರಳವಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ, ಮಗನ ಮದುವೆಯ ಸಂಭ್ರಮದ ಹಿನ್ನೆಲೆಯಲ್ಲಿ 500 ವಿಶೇಷ ಚೇತನ ವಧುಗಳಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ಗೌತಮ್ ಅದಾನಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಮಗನ ಮದುವೆ ಹಿನ್ನೆಲೆಯಲ್ಲಿ ಅವರು ಒಟ್ಟು 10 ಸಾವಿರ ಕೋಟಿ ರೂಪಾಯಿಯನ್ನು ಸಾಮಾಜಿಕ ಕಾರ್ಯಗಳಿಗೆ ದಾನ ಮಾಡಿದ್ದಾರೆ.
ಸುಮಾರು 21 ನೂತನ ವಿಶೇಷ ಚೇತನ ವಧುಗಳು ಹಾಗೂ ಅವರ ಪತಿಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಗೌತಮ್ ಅದಾನಿ ಅವರು ದಾನ ಮಾಡುವ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಮಗನ ಮದುವೆಯನ್ನು ಸರಳವಾಗಿ ನೆರವೇರಿಸುವ ಜತೆಗೆ, ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
“ನನ್ನ ಮಗ ಹಾಗೂ ಸೊಸೆಗೆ ಶುಭ ಹಾರೈಸುತ್ತ ಖುಷಿಯ ವಿಚಾರ ಹಂಚಿಕೊಳ್ಳುತ್ತಿದ್ದೇನೆ. ಪ್ರತಿ ವರ್ಷ 500 ವಿಶೇಷ ಚೇತನ ವಧುಗಳು ಹಾಗೂ ಅವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ನೀಡಲು ತೀರ್ಮಾನಿಸಿದ್ದೇನೆ. ಇದು ಜೀತ್ ಹಾಗೂ ದೀವಾ ಅವರ ಮದುವೆಯ ಉಡುಗೊರೆಯಾಗಿದೆ. ಇದರಿಂದಾಗಿ ವಿಶೇಷ ಚೇತನ ಹೆಣ್ಣುಮಕ್ಕಳು ಖುಷಿಯಿಂದ ಜೀವನ ಸಾಗಿಸಲು ನೆರವಾಗಲಿದೆ. ನಮ್ಮ ಆಶಯವೂ ಇದೇ ಆಗಿದೆ” ಎಂದು ಗೌತಮ್ ಅದಾನಿ ತಿಳಿಸಿದ್ದಾರೆ.
ಕಳೆದ ವರ್ಷ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹವು ತುಂಬ ಅದ್ಧೂರಿಯಾಗಿ ನೆರವೇರಿತ್ತು. ಇದಕ್ಕಾಗಿ ಮುಕೇಶ್ ಅಂಬಾನಿ ಅವರು ಸುಮಾರು 5 ಸಾವಿರ ಕೋಟಿ ರೂ. ವ್ಯಯಿಸಿದ್ದರು. ಆದರೆ, ಗೌತಮ್ ಅದಾನಿ ಅವರು ಆಡಂಬರದ ಮೊರೆ ಹೋಗಿಲ್ಲ.