ಬೆಂಗಳೂರು : ಕರ್ನಾಟಕದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದೆ. ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ವ್ಯತ್ಯಯಗೊಂಡಿದ್ದು, ರಾಜ್ಯದ ಹಲವು ಹೋಟೆಲ್‌ಗಳು ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ.
ಕೆಲವು ಹೋಟೆಲ್‌ಗಳು ಸೌದೆ ಒಲೆಗಳನ್ನು ಬಳಸಿಕೊಂಡು ಸೀಮಿತ ಮೆನುಗಳೊಂದಿಗೆ ಆಹಾರ ತಯಾರಿಸುತ್ತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಹಣ ಕೊಟ್ಟರೂ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗೃಹಬಳಕೆ ಸಿಲಿಂಡರ್ ಬಳಸುವುದಕ್ಕೂ ನಿಯಮಗಳ ಅಡ್ಡಿಯಿದೆ. ಸೌದೆ ಒಲೆಗಳನ್ನು ಬಳಸಲು ಬೇಕಾದಷ್ಟು ಜಾಗವೂ ಲಭ್ಯವಿಲ್ಲದ ಕಾರಣ ಹೋಟೆಲ್ ಮಾಲೀಕರು ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಐಡಿಸಿ ಹೋಟೆಲ್, ಮಲ್ಲೇಶ್ವರಂನ ಸಂಪಿಗೆ ರಸ್ತೆಯ ಹೋಳಿಗೆ ಮನೆ, ಬಸವನಗುಡಿಯ ಬೈಟು ಕಾಫಿ ಹೋಟೆಲ್, ಆನಂದರಾವ್ ಸರ್ಕಲ್‌ನ ಕೃಷ್ಣಸಾಗರ ಹೋಟೆಲ್ ಹಾಗೂ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಸೇರಿದಂತೆ ಹಲವು ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ 18ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಚನ್ನಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೆಂಕಟಾದ್ರಿ ಹೋಟೆಲ್, ಧಾರವಾಡದ 100 ವರ್ಷಗಳ ಇತಿಹಾಸವಿರುವ ಬಾಂಬೆ ರೆಸ್ಟೋರೆಂಟ್, ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಾಜಭವನ ಹೋಟೆಲ್, ಸಕಲೇಶಪುರದ ಮೈತ್ರಿ ಹಾಗೂ ಕರ್ನಾಟಕ ಹೋಟೆಲ್‌ಗಳು, ಯಾದಗಿರಿ ಬಸ್ ನಿಲ್ದಾಣದ ಬಳಿ ಇರುವ ಗುರುಮೂರ್ತಿ ಖಾನಾವಳಿ ಹಾಗೂ ತುಮಕೂರಿನ ಅಂತರಸನಹಳ್ಳಿ ಇಂದಿರಾ ಕ್ಯಾಂಟೀನ್ ಕೂಡ ಸಿಲಿಂಡರ್ ಕೊರತೆಯಿಂದ ಬಂದ್ ಆಗಿವೆ.
ಇದೇ ರೀತಿಯಾಗಿ ಇನ್ನೂ ನೂರಾರು ಹೋಟೆಲ್‌ಗಳು ಸಿಲಿಂಡರ್ ಸಿಗದೆ ಅನಿವಾರ್ಯವಾಗಿ ಶಟರ್ ಎಳೆಯಬೇಕಾದ ಪರಿಸ್ಥಿತಿಗೆ ತಲುಪಿವೆ. ಕೆಲವರು ಸಿಲಿಂಡರ್ ಸಿಗದೆ ಹೋಟೆಲ್ ಮುಚ್ಚಿದರೆ, ಇನ್ನೂ ಕೆಲವರು ಕಾಳಸಂತೆಯಲ್ಲಿ ದುಪ್ಪಟ್ಟು ಹಣ ನೀಡಿ ಸಿಲಿಂಡರ್ ಖರೀದಿಸಿ ಹೋಟೆಲ್ ನಡೆಸುತ್ತಿದ್ದಾರೆ. ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಂದ್ ಆಗಿರುವುದು ಹಾಗೂ ಮೆನು ಕಡಿತಗೊಂಡಿರುವುದರಿಂದ ಕಳೆದ ಐದು ದಿನಗಳಲ್ಲಿ ಹೋಟೆಲ್ ಉದ್ಯಮಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಉದ್ಯಮಿಗಳು ಅಂದಾಜಿಸಿದ್ದಾರೆ. ಹೋಟೆಲ್‌ಗಳು ಬಂದ್ ಆಗುತ್ತಿದ್ದಂತೆ ಸಿಬ್ಬಂದಿಗೂ ಸಂಕಷ್ಟ ಎದುರಾಗಿದೆ. ಸಂಪಾದನೆ ಇಲ್ಲದಿದ್ದರೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಹಲವೆಡೆ 200ಕ್ಕೂ ಹೆಚ್ಚು ಹೋಟೆಲ್ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಕಲಬುರಗಿಯ ಇಂದಿರಾ ಕ್ಯಾಂಟೀನ್ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ 10 ಮಹಿಳೆಯರು ಕೂಡ ಉದ್ಯೋಗ ಕಳೆದುಕೊಂಡಿದ್ದಾರೆ. ಚಪಾತಿ ಹಾಗೂ ರೊಟ್ಟಿ ತಯಾರಿಸುತ್ತಿದ್ದ ಸಿಬ್ಬಂದಿಗೆ ಸಿಲಿಂಡರ್ ಸಿಗುವವರೆಗೆ ಕೆಲಸಕ್ಕೆ ಬರಬೇಡಿ ಎಂದು ಗುತ್ತಿಗೆದಾರರು ತಿಳಿಸಿರುವುದಾಗಿ ಹೇಳಲಾಗಿದೆ. ಇನ್ನೂ ಕೆಲವು ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗೃಹಬಳಕೆ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಕೋಲಾರದಲ್ಲಿ ಎರಡು ಬೇಕರಿ ಮತ್ತು ಐದು ಹೋಟೆಲ್‌ಗಳಿಂದ 21 ಗೃಹಬಳಕೆ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.
ರಾಜ್ಯದಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ಅನಿಲ ಪೂರೈಕೆ ಕಂಪನಿಗಳೊಂದಿಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೋಟೆಲ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಖಾಲಿ ಹುದ್ದೆ ಭರ್ತಿಗೆ ಇಲ್ಲ ‘ಗ್ಯಾರಂಟಿ’!



















