ಬೆಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ಮೂಡಿರುವ ಪರಿಣಾಮ ದೇಶದ ವಿವಿಧ ವಲಯಗಳಿಗೆ ತಟ್ಟುತ್ತಿರುವಂತೆಯೇ, ಇದೀಗ ಅದರ ನೇರ ಪರಿಣಾಮ ನಗರ ಜೀವನಕ್ಕೂ ತಟ್ಟಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಇದರ ಪರಿಣಾಮವಾಗಿ ಹೋಟೆಲ್ ಉದ್ಯಮ ಮಾತ್ರವಲ್ಲದೆ, ಆನ್‌ಲೈನ್ ಡೆಲಿವರಿ ವ್ಯವಸ್ಥೆಯ ಮೇಲೂ ಭಾರೀ ಹೊಡೆತ ಬಿದ್ದಿದೆ.
ನಗರದ ಅನೇಕ ಹೋಟೆಲ್‌ಗಳಿಗೆ ಅಗತ್ಯವಿರುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳು ಸರಿಯಾಗಿ ಲಭ್ಯವಾಗದೆ, ಹಲವು ಹೋಟೆಲ್‌ಗಳು ತಮ್ಮ ಮೆನೂಗಳನ್ನು ಕಡಿತಗೊಳಿಸಿದ್ದರೆ, ಕೆಲವು ಹೋಟೆಲ್‌ಗಳು ಭಾಗಶಃ ಬಂದ್ ಆಗುವ ಪರಿಸ್ಥಿತಿಗೂ ತಲುಪಿವೆ. ಇದರಿಂದಾಗಿ ಗ್ರಾಹಕರಿಗೆ ಇಷ್ಟದ ಆಹಾರ ಪದಾರ್ಥಗಳು ಲಭ್ಯವಾಗುತ್ತಿಲ್ಲ.
ಇದರ ನೇರ ಪರಿಣಾಮವಾಗಿ Swiggy ಮತ್ತು Zomato ಮುಂತಾದ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್ಡರ್‌ಗಳ ಸಂಖ್ಯೆಯೂ ಕುಸಿದಿದೆ. ದಿನನಿತ್ಯ ಈ ಆ್ಯಪ್‌ಗಳ ಮೇಲೆ ಅವಲಂಬಿತವಾಗಿರುವ ಗಿಗ್ ವರ್ಕರ್ಸ್‌ಗಳಿಗೆ ಇದು ದೊಡ್ಡ ಸಂಕಷ್ಟವಾಗಿ ಪರಿಣಮಿಸಿದೆ.
“ಹಿಂದೆ ದಿನಕ್ಕೆ ಸಿಗುತ್ತಿದ್ದ ಆರ್ಡರ್‌ಗಳಿಗಿಂತ ಈಗ ಅರ್ಧಕ್ಕಿಂತಲೂ ಕಡಿಮೆ ಆಗಿವೆ. ಗಿಗ್ ಟೈಮ್ ಪೂರ್ಣಗೊಳಿಸಲು ಆಗುತ್ತಿಲ್ಲ. ಆದಾಯವೂ ಕುಸಿದಿದೆ,” ಎಂದು ಹಲವಾರು ಡೆಲಿವರಿ ಬಾಯ್ಸ್ ಅಳಲು ತೋಡಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಸಮರ್ಪಕವಾಗಿ ಆರ್ಡರ್‌ಗಳು ಸಿಗದೆ ಡೆಲಿವರಿ ಸಿಬ್ಬಂದಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ದಿನನಿತ್ಯದ ಆದಾಯದ ಮೇಲೆ ಬದುಕು ಕಟ್ಟಿಕೊಂಡಿರುವ ಗಿಗ್ ವರ್ಕರ್ಸ್‌ಗಳಿಗೆ ಇದು ಆರ್ಥಿಕ ಹೊಡೆತವಾಗಿದ್ದು, ಜೀವನ ನಡೆಸುವುದೇ ಕಷ್ಟಕರವಾಗಿದೆ.
ಮಧ್ಯಪ್ರಾಚ್ಯದ ಯುದ್ಧ ಭೀತಿ ಕೇವಲ ಅಂತರಾಷ್ಟ್ರೀಯ ಮಟ್ಟದಲ್ಲೇ ಸೀಮಿತವಾಗದೇ, ಬೆಂಗಳೂರಿನಂತಹ ಮಹಾನಗರದಲ್ಲಿ ಸಾಮಾನ್ಯ ಕಾರ್ಮಿಕರ ಬದುಕಿನ ಮೇಲೂ ನೇರ ಪರಿಣಾಮ ಬೀರಿದೆ. ಸಮಸ್ಯೆಗೆ ಶೀಘ್ರ ಪರಿಹಾರ ದೊರಕಬೇಕೆಂದು ಹೋಟೆಲ್ ಮಾಲೀಕರು ಹಾಗೂ ಡೆಲಿವರಿ ವರ್ಕರ್ಸ್ ಸರ್ಕಾರದತ್ತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ನೀರಾನೆ ದಾಳಿಗೆ ಪಶು ವೈದ್ಯೆ ಬಲಿ!



















