ಕಲಬುರಗಿ : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಯುದ್ಧದ ಪರಿಣಾಮ ರಾಜ್ಯದಲ್ಲಿಯೂ ಕಾಣಿಸಿಕೊಳ್ಳತೊಡಗಿದ್ದು, ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಕಲಬುರಗಿಯಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ ತೀವ್ರವಾಗುತ್ತಿದೆ. ಇದರ ಪರಿಣಾಮವಾಗಿ ನಗರದ ಇಂದಿರಾ ಕ್ಯಾಂಟಿನ್‌ಗಳಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ಹತ್ತು ದಿನಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತಕ್ಕೂ ತಟ್ಟಿದ್ದು, ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಲಬುರಗಿಯಲ್ಲಿ ನಿನ್ನೆಂದೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಕಂಡುಬಂದಿದ್ದು, ಹೋಟೆಲ್ ಉದ್ಯಮಿಗಳು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ನಗರದಲ್ಲಿರುವ ಎಂಟು ಇಂದಿರಾ ಕ್ಯಾಂಟಿನ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಿಬ್ಬಂದಿ ಸೌದೆ ಒಲೆಯನ್ನೇ ಆಶ್ರಯಿಸಿದ್ದಾರೆ. ನಿನ್ನೆವರೆಗೆ ಉಳಿದಿದ್ದ ಸಿಲಿಂಡರ್ ಬಳಸಿ ಅಡುಗೆ ಮಾಡಲಾಗಿದ್ದರೂ, ಇಂದು ಸಿಲಿಂಡರ್ ಲಭ್ಯವಾಗದ ಕಾರಣ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಸೌದೆ ಒಲೆಯಲ್ಲೇ ತಯಾರಿಸಲಾಗಿದೆ.
ಇದಲ್ಲದೆ ಚಪಾತಿಯನ್ನು ಹೊರಗಡೆಯಿಂದ ಖರೀದಿಸಿ ಜನರಿಗೆ ನೀಡಲಾಗುತ್ತಿದೆ. ಆಸ್ಪತ್ರೆಗಳ ಪಕ್ಕದಲ್ಲಿರುವ ಇಂದಿರಾ ಕ್ಯಾಂಟಿನ್‌ಗಳಲ್ಲಿ ಸಾಮಾನ್ಯವಾಗಿ ಇಡ್ಲಿ ಮತ್ತು ಸಾಂಬಾರ್‌ಗೆ ಹೆಚ್ಚಿನ ಬೇಡಿಕೆ ಇರುವುದಾದರೂ, ಗ್ಯಾಸ್ ಕೊರತೆಯಿಂದಾಗಿ ಇದೀಗ ಕೇವಲ ಉಪ್ಪಿಟ್ಟು ಮತ್ತು ಅವಲಕ್ಕಿ ಮಾತ್ರ ತಯಾರಿಸಲಾಗುತ್ತಿದೆ.
ಸೌದೆ ಒಲೆಯ ಮೇಲೆ ಅಡುಗೆ ಮಾಡುವುದಕ್ಕೆ ಕೆಲಸಗಾರರು ಮುಂದೆ ಬರದಿದ್ದರೂ, ಬಡವರು ಉಪವಾಸ ಇರಬಾರದು ಎಂಬ ಕಾರಣಕ್ಕೆ ನಾವು ಸ್ವತಃ ಅಡುಗೆ ಮಾಡುತ್ತಿದ್ದೇವೆ ಎಂದು ಕ್ಯಾಂಟಿನ್ ಸಿಬ್ಬಂದಿ ಬಸವರಾಜ್ ತಿಳಿಸಿದ್ದಾರೆ.
ಇದೇ ವೇಳೆ ಗ್ಯಾಸ್ ಕೊರತೆಯಿಂದ ರಾಜ್ಯದ ಹಲವು ಹೋಟೆಲ್‌ಗಳು, ಢಾಬಾಗಳು ಹಾಗೂ ಮದುವೆ ಸಮಾರಂಭಗಳಿಗೆ ಅಡುಗೆ ಮಾಡುವ ಕೇಟರಿಂಗ್ ಸಂಸ್ಥೆಗಳೂ ಸೌದೆ ಒಲೆಯತ್ತ ಮುಖ ಮಾಡಿವೆ. ನಗರದ ಕಟ್ಟಿಗೆ ಅಡ್ಡೆಗಳಲ್ಲಿ ಸೌದೆ ಖರೀದಿಸಲು ಜನರು ಮುಗಿಬಿದ್ದಿರುವುದು ಕಂಡುಬರುತ್ತಿದೆ. ವಿವಿಧ ಕಾರ್ಯಕ್ರಮಗಳಿಗೆ ಅಡುಗೆ ಗುತ್ತಿಗೆ ಪಡೆದಿರುವ ಕೇಟರಿಂಗ್ ಸಿಬ್ಬಂದಿ ಗ್ಯಾಸ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಅಭಾವವನ್ನೇ ಬಂಡವಾಳ ಮಾಡಿಕೊಂಡ ಧುರುಳರು



















