ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ‘ಗಾರ್ಡನ್ ಸಿಟಿ’ ಎಂದು ಕರೆಯಲ್ಪಡುತ್ತಿದ್ದ ನಗರ, ಈಗ ಕಸದ ಸಮಸ್ಯೆಯಿಂದ ಕಂಗಾಲಾಗುವ ಸ್ಥಿತಿಯಲ್ಲಿದೆ. ಈಗಾಗಲೇ ತೀವ್ರವಾದ ಕಸದ ವಿಲೇವಾರಿ ಸಂಕಷ್ಟದಿಂದ ಕೂಡಿರುವ ರಾಜಧಾನಿ ಬೆಂಗಳೂರು ಮತ್ತೊಂದು ಆಘಾತವನ್ನು ಎದುರಿಸುತ್ತಿದೆ.
ಕಸದ ಲಾರಿ ಮತ್ತು ಆಟೋ ಟಿಪ್ಪರ್ ಚಾಲಕರು ಹಾಗೂ ಸಹಾಯಕರು ತಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಬಂದ್ ಮಾಡಲು ಮುಂದಾಗಿದ್ದಾರೆ. ಮುಂದಿನ ತಿಂಗಳಿನಿಂದಲೇ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ 15, 2025ರಿಂದ ಪೌರ ಕಾರಿಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ತಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಕೂರಲು ಮುಂದಾಗಿದ್ದಾರೆ.
ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರಿಂದ ನಡೆಯುವ ಈ ಪ್ರತಿಭಟನೆಯಿಂದ ಸುಮಾರು 4,000 ಕಸದ ಆಟೋ ಟಿಪ್ಪರ್‌ಗಳು ಹಾಗೂ 700 ಕಸದ ಲಾರಿಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಬೆಂಗಳೂರಿನ ಕಸದ ವಿಲೇವಾರಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಬೆಂಗಳೂರಿಗೆ ಕಸದ ಸಂಕಷ್ಟ ಮತ್ತೊಮ್ಮೆ ಎದುರಾಗಲಿದೆ.
“ಸ್ಥಗಿತಕ್ಕೆ ಕಾರಣವೇನು ?”
ಕಸದ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತೊಡಗಿರುವ ಸುಮಾರು 10,000 ಸಿಬ್ಬಂದಿಗಳು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರು ತಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ದೀರ್ಘಕಾಲದಿಂದ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಈ ವಿಷಯದಲ್ಲಿ ಕಳೆದ ಬಾರಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಆದರೆ, ಈ ಭರವಸೆಗಳು ಕೇವಲ ಮಾತಿನಲ್ಲೇ ಉಳಿದಿವೆ ಎಂದು ಕಾರ್ಮಿಕರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. “ಬಿಬಿಎಂಪಿ ನಮ್ಮ ಆಗ್ರಹಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಖಾಯಂ ಕೆಲಸದ ಬೇಡಿಕೆಯನ್ನು ಈಡೇರಿಸದಿದ್ದರೆ, ನಾವು ಕಸದ ಸಂಗ್ರಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು, ಈ ಸಂಬಂಧಿಸಿದಂತೆ ಕಸದ ಲಾರಿ.ಆಟೋ ಚಾಲಕರ ಸಂಘದ ಅಧ್ಯಕ್ಷ ತ್ಯಾಗರಾಜ್ ಪ್ರತಿಕ್ರಿಯಿಸಿ, “ನಾವು ಅಪಾಯಕಾರಿ ಕೆಲಸದಲ್ಲಿ ತೊಡಗಿದ್ದೇವೆ, ಆದರೆ ಖಾಯಂ ಕೆಲಸ, ಆರೋಗ್ಯ ಭದ್ರತೆ, ಮತ್ತು ಗೌರವಾನ್ವಿತ ವೇತನವಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.