ಶಿವಮೊಗ್ಗ : ನಗರದ ಹೊರ ವಲಯದಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗೆ ಅಕ್ರಮವಾಗಿ ಬಿಸ್ಕೆಟ್ ಪ್ಯಾಕ್‌ನಲ್ಲಿ ಗಾಂಜಾ, ಸಿಗರೇಟ್ ಇಟ್ಟು ಸ್ನೇಹಿತನಿಗೆ ರವಾನಿಸಲು ಯತ್ನಿಸುತ್ತಿದ್ದರು. ಆ ವೇಳೆ ತುಂಗಾ ನಗರ ಪೋಲಿಸರು ಗಮನಿಸಿ ಬಂಧಿಸಿದ್ದಾರೆ. ಅವರು ಭದ್ರಾವತಿಯ ರಾಹಿಲ್ ಹಾಗೂ ತಸೀರುಲ್ಲಾಎಂದು ತಿಳಿದುಬಂದಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಭೇಟಿಗೆ ಇಬ್ಬರು ಗೆಳಯರು ಬಂದಿದ್ದು, ಕಾರಾಗೃಹದ ನಿಯಮಾವಳಿಯಂತೆ ಆಧಾರ್ ಕಾರ್ಡ್ ತೋರಿಸಿ, ಮಹಮ್ಮದ್ ಗೌಸ್ಗೆ ಕೊಡಲು ಬಿಸ್ಕೆಟ್ ಪ್ಯಾಕ್ ತೆಗೆದುಕೊಂಡು ಹೋಗುತ್ತಿದ್ದರು ಇಬ್ಬರ ಚಲನವಲನ ನೋಡಿ ಅನುಮಾನಗೊಂಡು ಕಾರಾಗೃಹದ ಭದ್ರತೆ ನೋಡಿಕೊಳ್ಳುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಬಿಸ್ಕೆಟ್ ಪ್ಯಾಕೆಟ್ ಪರಿಶೀಲನೆ ಮಾಡಿದಾಗ ಕಪ್ಪು ಗಮ್ ಟೇಪ್ನಲ್ಲಿ ಸುತ್ತಿದ್ದ ಮೂರು ಕಪ್ಪು ಬಣ್ಣದ ವಸ್ತುಗಳು ಕಂಡು ಬಂದಿವೆ. ತಪಾಸಣೆ ವೇಳೆ ಒಂದು ಗಾಂಜಾ ಪ್ಯಾಕೆಟ್ ಹಾಗೂ ಎರಡು ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.
ನಂತರ ಸಿಬ್ಬಂದಿ, ನಿಷೇಧಿತ ವಸ್ತುಗಳನ್ನು ತಂದಿರುವ ಆರೋಪದಡಿ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ. ಇದೀಗ ತುಂಗಾನಗರ ಪೊಲೀಸರು ಇಬ್ಬರ ವಿರುದ್ಧ ಎನ್ಡಿಪಿಎ ಪ್ರಕರಣ ದಾಖಲಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ.