ನವದೆಹಲಿ: ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಸುಮಾರು 50 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಇದಾದ ಬಳಿಕ ತ್ರಿವೇಣಿ ಸಂಗಮದ ನದಿಗಳ ಮಾಲಿನ್ಯದ ಕುರಿತು ಚರ್ಚೆಗಳಾಗುತ್ತಿವೆ. ಇದು ರಾಜಕೀಯ ತಿರುವು ಕೂಡ ಪಡೆದಿದೆ. ಇದರ ಬೆನ್ನಲ್ಲೇ, ಗಂಗಾ ನದಿಯ ನೀರು (Ganga River) ವಿಶ್ವದಲ್ಲೇ ಅತಿ ಸ್ವಚ್ಛವಾದ ನದಿ ನೀರು ಎಂದು ವಿಜ್ಞಾನಿಯೊಬ್ಬರ ನೇತೃತ್ವದಲ್ಲಿ ನಡೆದ ಅಧ್ಯಯನ ವರದಿ ತಿಳಿಸಿದೆ.
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರಿಂದಲೇ ಮೆಚ್ಚುಗೆ ಪಡೆದ ವಿಜ್ಞಾನಿ, ಪದ್ಮಶ್ರೀ ಪುರಸ್ಕೃತ ಡಾ.ಅಜಯ್ ಸೊಂಕರ್ ಅವರ ನೇತೃತ್ವದ ತಂಡವು ಗಂಗಾನದಿ ನೀರಿನ ಸ್ವಚ್ಛತೆ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನ ವರದಿ ಪ್ರಕಾರ, “ಗಂಗಾ ನದಿಯು ವಿಶ್ವದಲ್ಲೇ ಸ್ವಚ್ಛ ನೀರು ಹೊಂದಿದೆ. ಗಂಗಾ ನದಿಯಲ್ಲಿ ಸುಮಾರು 1,100 ಅತಿ ಸೂಕ್ಷ್ಮಾಣು ಜೀವಿಗಳೇ ನದಿಯ ನೀರನ್ನು ಸ್ವಚ್ಛ ಮಾಡುತ್ತವೆ. ಇವುಗಳು 50 ಮಾದರಿಯ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ” ಎಂದು ತಿಳಿದುಬಂದಿದೆ.
ಡಾ.ಅಜಯ್ ಸೊಂಕರ್ ಅವರು ವಿಜ್ಞಾನಿಯಾಗಿದ್ದು, ಸೂಕ್ಷ್ಮಾಣು ಜೀವಿಗಳ ಕುರಿತು ಅಧ್ಯಯನ ನಡೆಸಿದ ಅನುಭವ ಹೊಂದಿದ್ದಾರೆ. ಹಾರ್ವರ್ಡ್, ಜಪಾನ್ ಸೇರಿ ಹಲವು ದೇಶಗಳ ವಿವಿಗಳ ಸಂಶೋಧನೆಯಲ್ಲಿ ಇವರು ಪಾಲ್ಗೊಂಡಿದ್ದಾರೆ. ಇವರ ನೇತೃತ್ವದ ತಂಡದ ಅಧ್ಯಯನ ವರದಿ ಪ್ರಕಾರ, ಗಂಗಾ ನದಿಯು ನೈಸರ್ಗಿಕವಾಗಿಯೇ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
ಗಂಗಾ ನದಿಯ ನೀರು ಸೇರಿ ತ್ರಿವೇಣಿ ಸಂಗಮದ ನೀರು ಸ್ನಾನಕ್ಕೂ ಯೋಗ್ಯವಲ್ಲ. ಚರಂಡಿ, ಮಲದ ನೀರು ಬಂದು ನದಿಗೆ ಸೇರುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ವರದಿ ಬಿಡುಗಡೆ ಮಾಡಿತ್ತು. ಇದನ್ನು ಅಲ್ಲಗಳೆದಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು, ಗಂಗಾ ನದಿಯ ನೀರು ಸ್ನಾನಕ್ಕೆ ಮಾತ್ರವಲ್ಲ, ಕುಡಿಯಲೂ ಯೋಗ್ಯ ಎಂದು ಹೇಳಿದ್ದರು.