ವಾಷಿಂಗ್ಟನ್: ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ನಡುವಿನ ಗ್ಯಾಂಗ್ ವಾರ್ ಈಗ ಅಮೆರಿಕಕ್ಕೂ ವ್ಯಾಪಿಸಿದ್ದು, ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಚರ ಹರಿ ಬಾಕ್ಸರ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ಮತ್ತೊಬ್ಬ ಗ್ಯಾಂಗ್‌ಸ್ಟರ್ ರೋಹಿತ್ ಗೋದಾರ ಹೊತ್ತುಕೊಂಡಿದ್ದಾನೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ದಾಳಿಯನ್ನು ತಾನು ಮತ್ತು ಗೋಲ್ಡಿ ಬ್ರಾರ್ ಸಂಘಟಿಸಿದ್ದಾಗಿ ಗೋದಾರ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾನೆ.
ದಾಳಿಯ ವೇಳೆ ಹರಿ ಬಾಕ್ಸರ್‌ನ ಸಹಚರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ಹರಿ ಬಾಕ್ಸರ್ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ವರದಿಯಾಗಿದೆ.
“ಕ್ಯಾಲಿಫೋರ್ನಿಯಾದ ಫ್ರೆಸ್ನೋದಲ್ಲಿ, ಹೈವೇ 41ರ ಎಕ್ಸಿಟ್ 127ರ ಬಳಿ ಇಂದು (ಹರಿ ಬಾಕ್ಸರ್) ಅಲಿಯಾಸ್ (ಹರಿಯಾ) ಮೇಲೆ ನಡೆದ ಗುಂಡಿನ ದಾಳಿಯನ್ನು ನಾವು (ರೋಹಿತ್ ಗೋದಾರ) (ಗೋಲ್ಡಿ ಬ್ರಾರ್) ಸಹೋದರರು ಆಯೋಜಿಸಿದ್ದೇವೆ. ಆತನ ಸಹಚರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ! ಇನ್ನೊಬ್ಬನಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ! ಆದರೆ ಈ ಹೇಡಿ (ಹರಿ ಬಾಕ್ಸರ್) ಕಾರ್ ಸೀಟ್‌ನ ಕೆಳಗೆ ಅಡಗಿ ಕುಳಿತಿದ್ದ!” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯಲಾಗಿದೆ.
“ಅವನು ಭೂಮಿಯ ಯಾವುದೇ ಮೂಲೆಯಲ್ಲಿ ಅಡಗಿಕೊಂಡರೂ ನಾವು ಅವನನ್ನು ಬಿಡುವುದಿಲ್ಲ! ಲಾರೆನ್ಸ್ ಬಿಷ್ಣೋಯ್‌ನನ್ನು ತನ್ನ ತಂದೆ ಎಂದು ಪರಿಗಣಿಸಿ, ಆತ ನಮ್ಮ ವಿರುದ್ಧ ನಿಂದನೀಯ ಮಾತುಗಳನ್ನಾಡುತ್ತಿದ್ದ. ಅವನಿಗೆ ನಮ್ಮ ಮುಂದೆ ನಿಲ್ಲುವ ಯೋಗ್ಯತೆ ಇಲ್ಲ! ಕೆಲವರು ತಮ್ಮ ಆದರ್ಶ ಎಂದು ಭಾವಿಸುವ ವ್ಯಕ್ತಿಯೇ ಈ ಭೂಮಿಯ ಮೇಲಿನ ಅತಿದೊಡ್ಡ ದೇಶದ್ರೋಹಿ! ಸಮಯ ತೆಗೆದುಕೊಳ್ಳಬಹುದು, ಆದರೆ ಯಾರನ್ನೂ ಕ್ಷಮಿಸಲಾಗುವುದಿಲ್ಲ!” ಎಂದು ಗೋದಾರ ಎಚ್ಚರಿಕೆ ನೀಡಿದ್ದಾನೆ.
“ಲಾರೆನ್ಸ್ ಬಿಷ್ಣೋಯ್ vs ರೋಹಿತ್ ಗೋದಾರ”
ರೋಹಿತ್ ಗೋದಾರ ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿದ್ದ. ಆದರೆ, ಕೆಲವು ತಿಂಗಳುಗಳ ಹಿಂದೆ ಅದರಿಂದ ಹೊರಬಂದು ಗೋಲ್ಡಿ ಬ್ರಾರ್ ಜೊತೆಗೂಡಿ ತನ್ನದೇ ಆದ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದಾನೆ. ಗೋದಾರ ಮತ್ತು ಬ್ರಾರ್ ಇಬ್ಬರೂ ರಾಷ್ಟ್ರೀಯ ತನಿಖಾ ದಳ (NIA) ಮತ್ತು ಹಲವಾರು ರಾಜ್ಯ ಪೊಲೀಸ್ ಘಟಕಗಳಿಗೆ ಬೇಕಾದ ಆರೋಪಿಗಳಾಗಿದ್ದಾರೆ.
ಕಳೆದ ಕೆಲವು ವಾರಗಳಿಂದ ಎರಡೂ ಗ್ಯಾಂಗ್‌ಗಳ ನಡುವಿನ ವೈಷಮ್ಯ ತಾರಕಕ್ಕೇರಿದೆ. ಕಳೆದ ತಿಂಗಳು, ಗೋದಾರನು ಬಿಷ್ಣೋಯ್‌ನನ್ನು ‘ದೇಶದ್ರೋಹಿ’ ಎಂದು ಆರೋಪಿಸಿದ್ದ. ತನ್ನ ಸಹೋದರ ಅನ್ಮೋಲ್‌ನನ್ನು ಉಳಿಸಲು ಬಿಷ್ಣೋಯ್ ಅಮೆರಿಕದ ಏಜೆನ್ಸಿಯೊಂದಿಗೆ ಕೈಜೋಡಿಸಿದ್ದು, ದೇಶದ ಸೂಕ್ಷ್ಮ ಮಾಹಿತಿಯನ್ನು ಅವರಿಗೆ ನೀಡುತ್ತಿದ್ದಾನೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಆರೋಪಿಸಿದ್ದ. ಅಲ್ಲದೆ, ಪ್ರಚಾರಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ಬಿಷ್ಣೋಯ್ ಉದ್ದೇಶಿಸಿದ್ದಾನೆ ಎಂದೂ ಗೋದಾರ ಹೇಳಿಕೊಂಡಿದ್ದ. ತನ್ನನ್ನು ಅಥವಾ ತನ್ನ ಸಹಚರರನ್ನು ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಜೋಡಿಸದಂತೆ ಮಾಧ್ಯಮಗಳಿಗೆ ಆತ ಮನವಿ ಮಾಡಿದ್ದ.